ಟ್ರಂಪ್ ‘ರಶ್ಯ ಏಜೆಂಟ್’?: ಅಮೆರಿಕ ಅಧ್ಯಕ್ಷರ ರಶ್ಯ ನಂಟಿನ ಬಗ್ಗೆ ಎಫ್‌ಬಿಐ ತನಿಖೆ

Update: 2019-01-14 03:36 GMT

ವಾಶಿಂಗ್ಟನ್, ಜ.15: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಗಳಿಸಲು ರಶ್ಯದೊಂದಿಗೆ ಟ್ರಂಪ್ ಬೆಳೆಸಿದ್ದ ರಹಸ್ಯ ಮೈತ್ರಿಯು ಆನಂತರವೂ ಮುಂದುವರಿದಿದೆಯೇ ಎಂಬ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ತನಿಖೆ ನಡೆಸುತ್ತಿದೆಯೆಂಬ ಸ್ಫೋಟಕ ಮಾಹಿತಿಯನ್ನು ಅಮೆರಿಕದ ಖ್ಯಾತ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಶನಿವಾರ ಬಹಿರಂಗಪಡಿಸಿದೆ.

2017ರಿಂದಲೇ ಎಫ್‌ಬಿಐ ಈ ಬಗ್ಗೆ ತನಿಖೆಯನ್ನು ಆರಂಭಿಸಿದ ಕೆಲವೇ ದಿನಗಳ ಬಳಿಕ ಡೊನಾಲ್ಡ್ ಟ್ರಂಪ್ ಅವರು ಎಫ್‌ಬಿಐ ವರಿಷ್ಠ ಜೇಮ್ಸ್ ಕೊಮೆ ಅವರನ್ನು ವಜಾಗೊಳಿಸಿದ್ದರು.

ಜೇಮ್ಸ್ ಬಿ. ಕೊಮೆ ಅವರನ್ನು ಎಫ್‌ಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದ ಕೆಲವು ದಿನಗಳ ಬಳಿಕ ಕಾನೂನು ಅನುಷ್ಠಾನ ಅಧಿಕಾರಿಗಳು ಅಮೆರಿಕದ ಕಾನೂನು ಅನುಷ್ಠಾನ ಅಧಿಕಾರಿಗಳು ಅಧ್ಯಕ್ಷರ ನಡವಳಿಕೆಯಿಂದ ತೀವ್ರ ಆತಂಕಗೊಂಡಿದ್ದರು. ಟ್ರಂಪ್ ಅವರು ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ರಶ್ಯದ ಪರವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆಯನ್ನು ಅವರು ಆರಂಭಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಮಧ್ಯೆ ಡೊನಾಲ್ಡ್ ಟ್ರಂಪ್ ಅವರು ಫಾಕ್ಸ್‌ನ್ಯೂಸ್ ಸುದ್ದಿವಾಹಿನಿಗೆ ದೂರವಾಣಿ ಮೂಲಕ ನೀಡಿದ 20 ನಿಮಿಷಗಳ ಸಂದರ್ಶನದಲ್ಲಿ ತಾನು ತನ್ನ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ, ರಶ್ಯಕ್ಕೆ ಪ್ರಯೋಜನವಾಗುವ ಹಾಗೆ ಕೆಲಸ ಮಾಡುತ್ತಿರುವ ಬಗ್ಗೆ ಎಫ್‌ಬಿಐ ತನಿಖೆಯನ್ನು ಆರಂಭಿಸಿದೆಯೆಂಬ ನ್ಯೂಯಾರ್ಕ್ ಟೈಮ್ಸ್‌ನ ವರದಿಯನ್ನು ತಿರಸ್ಕರಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯು ಈವರೆಗೆ ಬರೆಯಲಾದ ಅತ್ಯಂತ ಅವಮಾನಕಾರಿ ಲೇಖನವೆಂದು ಅವರು ಕಿಡಿಕಾರಿದ್ದಾರೆ.

ಒಂದು ವೇಳೆ ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸಲು ಅನುದಾನ ಕೋರುವ ತನ್ನ ಪ್ರಸ್ತಾಪಕ್ಕೆ ಡೆಮಾಕ್ರಾಟರು ಒಪ್ಪಿಗೆ ನೀಡದಿದ್ದಲ್ಲಿ ತಾನು ರಾಷ್ಟ್ರೀಯ ತುರ್ತು ಸ್ಥಿತಿ ಘೋಷಿಸುವುದಾಗಿಯೂ ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News