ಸೌದಿ ತರುಣಿಗೆ ಕೆನಡ ಆಶ್ರಯ

Update: 2019-01-13 16:59 GMT

ಟೊರಾಂಟೊ,ಜ.13: ಕೌಟುಂಬಿಕ ದೌರ್ಜನ್ಯಕ್ಕೊಳಗಾಗಿರುವುದಾಗಿ ಆರೋಪಿಸಿ,ವಿದೇಶದಲ್ಲಿ ಆಶ್ರಯ ಕೋರಿದ್ದ ಸೌದಿ ಯುವತಿಗೆ ಕೆನಡದಲ್ಲಿ ಆಶ್ರಯ ದೊರೆತಿದೆ. ಶನಿವಾರ ಟೊರಾಂಟೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ 18 ವರ್ಷ ವಯಸ್ಸಿನ ರಹಾಫ್ ಮುಹಮ್ಮದ್ ಅಲ್-ಖುನೂನ್ ರನ್ನು ಕೆನಡಾದ ವಿದೇಶಾಂಗ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಸ್ವಾಗತಿಸಿದರು. ಸಚಿವೆ ಫ್ರೀಲ್ಯಾಂಡ್ ಜೊತೆಗೆ ಮುಗುಳ್ನಗುತ್ತಾ ಪತ್ರಿಕಾ ಛಾಯಾಗ್ರಾಹಕರಿಂದ ರಹಾಫ್‌ ಫೋಟೋ ತೆಗೆಸಿಕೊಂಡರಾದರೂ, ಯಾವುದೇ ಹೇಳಿಕೆಯನ್ನು ನೀಡಲಿಲ್ಲ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಫ್ರೀಲ್ಯಾಂಡ್ ಅವರು ಕೆನಡ ಹಾಗೂ ಜಗತ್ತಿನಾದ್ಯಂತದ ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಬೆಂಬಲಿಸುವ ಕೆನಡ ಸರಕಾರದ ನೀತಿಯ ಅಂಗವಾಗಿ ರಹಾಫ್‌ಗೆ ಆಶ್ರಯ ನೀಡಲಾಗಿದೆ ಎಂದರು. ಆದರೆ ಈ ವಿದ್ಯಮಾನವು ಈಗಾಗಲೇ ಸೌದಿಯ ಜೊತೆ ಹಳಸಿರುವ ಕೆನಡದ ಬಾಂಧವ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆಯೆಂಬ ಸುದ್ದಿಗಾರರ ಪ್ರಶ್ನೆಗೆ ಆಕೆ ಉತ್ತರಿಸಲು ನಿರಾಕರಿಸಿದರು.

ರಹಾಫ್ ಅವರು ತಾನು ತನ್ನ ಕುಟುಂಬದ ಸದಸ್ಯರಿಂದ ದೌರ್ಜನ್ಯಕ್ಕೊಳಗಾಗಿರುವುದಾಗಿ ಆರೋಪಿಸಿ, ವಿದೇಶದಲ್ಲಿ ಆಶ್ರಯ ಯಾಚಿಸಿದ್ದರು. ಆಕೆ ಕುಟುಂಬದೊಂದಿಗೆ ಕುವೈತ್ ಪ್ರವಾಸದಲ್ಲಿದ್ದಾಗ ತಪ್ಪಿಸಿಕೊಂಡು ಥಾಯ್ಲೆಂಡ್‌ಗೆ ಆಗಮಿಸಿದ್ದರು. ಆಸ್ಟ್ರೇಲಿಯ ಪ್ರಯಾಣಿಸುವ ಯೋಜನೆ ಹೊಂದಿದ್ದ ಆಕೆಯ ಪಾಸ್‌ಪೋರ್ಟನ್ನು ಥಾಯ್ ಅಧಿಕಾರಿಗಳು ವಶಪಡಿಸಿಕೊಂಡರಲ್ಲದೆ, ಆಕೆಯನ್ನು ಕುಟುಂಬಿಕರಲ್ಲಿಗೆ ವಾಪಸ್ ಕಳುಹಿಸುವ ಬೆದರಿಕೆ ಹಾಕಿದ್ದರು. ರಹಾಫ್ ಹಾಗೂ ಅವರ ತಂದೆ ಬ್ಯಾಂಕಾಕ್‌ಗೆ ಆಗಮಿಸಿ ಆಕೆಯನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿದ್ದರು. ಅದನ್ನು ಒಪ್ಪದ ರಹಾಫ್, ಥಾಯ್ ವಿಮಾನನಿಲ್ದಾಣದ ಹೊಟೇಲ್‌ನಲ್ಲಿ ಧರಣಿ ಹೂಡಿದ್ದರು. ಟ್ವಿಟರ್ ಖಾತೆ ತೆರೆದು, ವಿದೇಶದಲ್ಲಿ ಆಶ್ರಯ ಕೋರಿ, ಸಾಮಾಜಿಕ ಜಾಲತಾಣ ಅಭಿಯಾನವನ್ನು ಆರಂಭಿಸಿದ್ದರು. ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಯ ಜೊತೆ ಥಾಯ್ ಅಧಿಕಾರಿಗೆಳು ಮಾತುಕತೆ ನಡೆಸಿದ ಬಳಿಕ ರಹಾಫ್ ಕೆನಡಕ್ಕೆ ಪ್ರಯಾಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News