ಉತ್ತರ ಪ್ರದೇಶ ಎನ್‍ಕೌಂಟರ್ ಪ್ರಕರಣಗಳನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ: ಸುಪ್ರೀಂ ಕೋರ್ಟ್

Update: 2019-01-14 10:41 GMT

ಹೊಸದಿಲ್ಲಿ, ಜ.14: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಎನ್ ಕೌಂಟರ್ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ಒಪ್ಪಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ನಿಗದಿ ಪಡಿಸಲಾಗಿದೆ.

ಇತ್ತೀಚೆಗೆ ನಡೆದ ಎನ್ ಕೌಂಟರ್ ಗಳಿಗೆ ಸಂಬಂಧಿಸಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಎಸ್ ಐಟಿ ತನಿಖೆ ನಡೆಯಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಸಂಬಂಧಿಸಿ ಕೋರ್ಟ್ ಆದಿತ್ಯನಾಥ್ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಎನ್ ಕೌಂಟರ್ ಗಳನ್ನು ನಿಯಮ ಪ್ರಕಾರವೇ ನಡೆಸಲಾಗಿದೆ ಎಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಹೇಳಿತ್ತು. ರಾಜ್ಯದಲ್ಲಿ ಕ್ರಿಮಿನಲ್ ಗಳನ್ನು ಎನ್ ಕೌಂಟರ್ ಗಳಲ್ಲಿ ಹತ್ಯೆ ನಡೆಸಲಾಗಿರುವ ಬಗ್ಗೆ ಕಳೆದ ನವೆಂಬರ್ ತಿಂಗಳಿನಲ್ಲಿ ಪ್ರತಿಕ್ರಿಯಿಸಿದ್ದ ರಾಜ್ಯ ಸರಕಾರ ತಮ್ಮ ಮೇಲೆ ಬಂದೂಕು ಹಾಗೂ ಇತರ ಶಸ್ತ್ರಾಸ್ತ್ರಗಳಿಂದ ದಾಳಿ ನಡೆದಾಗ ಪೊಲೀಸರು ಆತ್ಮರಕ್ಷಣೆಗಾಗಿ ದಾಳಿ ನಡೆಸಬೇಕಾಗಿತ್ತು ಎಂದು ಹೇಳಿತ್ತಲ್ಲದೆ ಅನಗತ್ಯವಾಗಿ ಅಲ್ಪಸಂಖ್ಯಾತ ಸಮುದಾಯದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿತ್ತು.

ರಾಜ್ಯದಲ್ಲಿ ಆದಿತ್ಯನಾಥ್ ಸರಕಾರ ಮಾರ್ಚ್ 2017ರಲ್ಲಿ ಅಧಿಕಾರ ವಹಿಸಿದಂದಿನಿಂದ ಆಗಸ್ಟ್ 4, 2018ರ ತನಕ 24 ಜಿಲ್ಲೆಗಳಲ್ಲಿ ನಡೆದ ಒಟ್ಟು 2,351 ಎನ್‍ಕೌಂಟರ್ ಗಳಲ್ಲಿ 63 ಮಂದಿ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News