ಐಟಿ ದಾಳಿ ಹಿನ್ನೆಲೆ: ವಿಚಾರಣೆಗೆ ಹಾಜರಾದ ನಟ ಸುದೀಪ್

Update: 2019-01-14 12:58 GMT

ಬೆಂಗಳೂರು, ಜ.14: ಕನ್ನಡ ಚಿತ್ರರಂಗದ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಪ್ರಕರಣ ಸಂಬಂಧ ನಟ ಸುದೀಪ್ ಹಾಗೂ ಅವರ ಕಚೇರಿಯ ಸಿಬ್ಬಂದಿ ವಿಚಾರಣೆಗೆ ಹಾಜರಾದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯ ಆದಾಯ ತೆರಿಗೆ ಇಲಾಖೆಗೆ ಆಸ್ತಿ, ವ್ಯವಹಾರ ಸಂಬಂಧ ದಾಖಲೆಗಳೊಂದಿಗೆ ಹಾಜರಾದ ಸುದೀಪ್ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನಿಸಿ, ಅವರ ಹೇಳಿಕೆ ದಾಖಲು ಮಾಡಿದರು ಎಂದು ತಿಳಿದುಬಂದಿದೆ.

ಇತ್ತೀಚಿಗೆ ಜೆಪಿ ನಗರದ ಸುದೀಪ್ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಅದರಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ, ಸೋಮವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿಚಾರಣೆಗೆ ಹಾಜರಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುವುದು ನಮ್ಮ ತಪ್ಪಿನಿಂದ. ತಪ್ಪೇ ಮಾಡದೆ ಆಮಂತ್ರಣ ಕೊಡಲು ಬರುವುದಿಲ್ಲ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದು ಎಚ್ಚರಿಕೆ ಅಷ್ಟೇ ಎಂದು ತಿಳಿಸಿದರು.

ಈ ಘಟನೆಗಳಿಂದ ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳಬೇಕು. ಬೇರೆ ನಟರ ಮನೆ ಮೇಲೆ ದಾಳಿ ಹಾಗೂ ಹೇಳಿಕೆಗಳ ಬಗ್ಗೆ ನನಗೆ ಗೊತ್ತಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಎಲ್ಲರೂ ನಮ್ಮನ್ನು ಪ್ರಶ್ನಿಸುತ್ತಾರೆ. ಉತ್ತರ ಕೊಡಲು ಹಿಂಜರಿದರೆ ತಪ್ಪುಸಂದೇಶ ಹೋಗುತ್ತದೆ ಎಂದು ಹೇಳಿದರು.

ಬೇರೆಯವರ ಸ್ಥಾನದಲ್ಲಿ ನಾನು ನಿಂತು ಹೇಳಲು ಸಾಧ್ಯವಿಲ್ಲ. ಅವರ ಸಮಸ್ಯೆ ಬಗ್ಗೆ ಅವರೇ ಹೇಳಬೇಕು. ನಾನು ನನ್ನ ಮನೆಯಲ್ಲಿ ನಡೆದ ಘಟನೆ ಬಗ್ಗೆ ಮಾತ್ರ ಹೇಳಬಲ್ಲೆ. ಮತ್ತೆ ವಿಚಾರಣೆಗೆ ನೋಟಿಸ್ ಬಂದರೆ ಹಾಜರಾಗುತ್ತೇನೆ ಎಂದು ಅವರು ತಿಳಿಸಿದರು.

ಯಶ್ ಮಾವ ಹಾಜರು

ಯಶ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಹಿನ್ನೆಲೆ ಆಡಿಟರ್ ನಾಗೇಶ್ ನಾಯಕ್ ಜೊತೆ ಯಶ್ ಮಾವ, ನಟಿ ರಾಧಿಕಾ ಪಂಡಿತ್ ತಂದೆ ಕೃಷ್ಣ ಪ್ರಸಾದ್, ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News