13 ಸ್ಥಳೀಯ ಸಂಸ್ಥೆಗಳ ಚುನಾವಣಾ ಅಧಿಸೂಚನೆ ರದ್ದುಗೊಳಿಸಿದ ಹೈಕೋರ್ಟ್

Update: 2019-01-14 16:53 GMT

ಬೆಂಗಳೂರು, ಜ.14: ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲು ನಿಗದಿಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಂತಿಮ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಕುರಿತಂತೆ ಸಲ್ಲಿಸಲಾಗಿದ್ದ 30ಕ್ಕೂ ಹೆಚ್ಚು ಅರ್ಜಿಗಳಲ್ಲಿ 13 ಪಟ್ಟಣ ಪಂಚಾಯತ್ ಮತ್ತು ನಗರಸಭೆಗಳಿಗೆ ಹೊಸ ಅಧಿಸೂಚನೆ ಹೊರಡಿಸಲು ಆದೇಶಿಸಲಾಗಿದೆ. ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್.ಸುನಿಲ್‌ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ತೀರ್ಪು ಪ್ರಕಟಿಸಿದೆ. ರಾಜ್ಯಾದ್ಯಂತ 26 ಜಿಲ್ಲೆಗಳಲ್ಲಿನ 2,593 ಸ್ಥಳೀಯ ಸಂಸ್ಥೆಯ ವಾರ್ಡ್‌ಗಳಿಗೆ 2019ರ ಮಾರ್ಚ್‌ನಲ್ಲಿ ಅಧಿಕಾರವಧಿ ಪೂರ್ಣಗೊಳ್ಳುತ್ತಿದ್ದು, ಚುನಾವಣೆ ನಡೆಸಬೇಕಿದೆ. 

ಆಕ್ಷೇಪ ಏನು: ಕ್ಷೇತ್ರ ಮರು ವಿಂಗಡಣೆ ಹಾಗೂ ವಾರ್ಡ್‌ವಾರು ಮೀಸಲು ನಿಗದಿಪಡಿಸುವಾಗ ಸರಕಾರ ಮಾರ್ಗಸೂತ್ರಗಳನ್ನು ಅನುಸರಿಸಿಲ್ಲ. ಸಂವಿಧಾನದ ವಿಧಿ 243(ಟಿ) ಪ್ರಕಾರ ಮೀಸಲು ಹೇಗಿರಬೇಕು ಎಂಬುದನ್ನು ವಿವರಿಸಲಾಗಿದೆ. ಆದರೆ ಅದನ್ನು ಸರಕಾರ ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಅಧಿಸೂಚನೆ ರದ್ದಾದ ಸ್ಥಳೀಯ ಸಂಸ್ಥೆಗಳು

ಮಂಗಳೂರು ಮಹಾನಗರ ಪಾಲಿಕೆ

ಚಿಕ್ಕಮಗಳೂರು ನಗರಸಭೆ

ಚನ್ನರಾಯಪಟ್ಟಣ ಪುರಸಭೆ

ರಾಮನಗರ ನಗರಸಭೆ

ದೊಡ್ಡಬಳ್ಳಾಪುರ ನಗರಸಭೆ

ಗುಡಿಬಂಡೆ ಪಟ್ಟಣ ಪಂಚಾಯತ್

ವಿಜಯಪುರ ಪುರಸಭೆ

ಭದ್ರಾವತಿ ನಗರಸಭೆ

ತೀರ್ಥಹಳ್ಳಿ ಪಟ್ಟಣ ಪಂಚಾಯತ್

ಶಿರಾ ನಗರಸಭೆ

ತರೀಕೆರೆ ಪುರಸಭೆ

ಬೇಲೂರು ಪುರಸಭೆ

ಮಡಿಕೇರಿ ನಗರಸಭೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News