×
Ad

ಅಂಧ ಮಕ್ಕಳಿಗೆ ಸರಕಾರದಿಂದ ಅಗತ್ಯ ನೆರವು: ಪರಿಷತ್ ಸದಸ್ಯ ಟಿ.ಎ.ಶರವಣ

Update: 2019-01-14 21:55 IST

ಬೆಂಗಳೂರು, ಜ.14: ಅಂಧ ಮಕ್ಕಳ ಕಲ್ಯಾಣಕ್ಕೆ ಸರಕಾರದಿಂದ ಅಗತ್ಯ ನೆರವು ಕೊಡಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಭರವಸೆ ನೀಡಿದ್ದಾರೆ.

ಸೋಮವಾರ ನಗರದ ಶ್ರೀ ರಾಕುಂ ಅಂಧರ ಶಾಲೆಯ 21ನೆ ವಾರ್ಷಿಕೋತ್ಸವ ಉದ್ಭಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ಕುಟುಂಬದಲ್ಲಿ ಒಂದು ಮಗುವನ್ನು ಪೋಷಣೆ ಮಾಡುವುದೇ ಕಷ್ಟ. ಅಂಥದ್ದರಲ್ಲಿ ಸಾವಿರ ಅಂಗವೈಕಲ್ಯ ಮತ್ತು ಅಂಧ ಮಕ್ಕಳನ್ನು ಸಾಕಿ ಸಲಹುತ್ತಿರುವ ಶ್ರೀ ರಾಕುಂ ಶಾಲೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಇಂತಹ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಲವು ವಿದ್ಯಾರ್ಥಿಗಳು ಐಎಎಸ್ ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಹೀಗಾಗಿ, ಅಂಧ ಮಕ್ಕಳ ಕಲ್ಯಾಣಕ್ಕಾಗಿ ನೆರವು ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ಅಂಧ ಮತ್ತು ಸಾಮಾನ್ಯ ಮಕ್ಕಳು ನಡೆಸಿಕೊಟ್ಟ ‘ಪರಿಸರ, ಶಿಕ್ಷಣ ಮತ್ತು ಜೀವಜಲ’ದ ನಾಟಕ ನೋಡುಗರ ಗಮನ ಸೆಳೆಯಿತು. ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಹಾಗೂ ಐಎಎಸ್ ತರಬೇತಿ ಪಡೆಯುತ್ತಿರುವ ಅಂಧ ಯುವಕ ಸದಾನಂದ ಮತ್ತು ಕೆಎಎಸ್ ತರಬೇತಿ ಪಡೆಯುತ್ತಿರುವ ಅಂಧೆ ಕುಮಾರಿ ಭವ್ಯಾ ಆವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ವಿ.ವೆಂಕಟೇಶ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಜೆ.ಅಲೆಗ್ಸಾಂಡರ್, ವಿಜಯ್ ಗೋರೆ, ಐಆರ್‌ಎಸ್ ಅಧಿಕಾರಿ ನೂತನ್ ಒಡೆಯರ್ ಹಾಗೂ ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News