ಜ.17ಕ್ಕೆ ಆದಿಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ
ಬೆಂಗಳೂರು, ಜ. 14: ಪರಿಶಿಷ್ಟ ಜಾತಿಯಲ್ಲಿ ಗುರುತಿಸಿಕೊಂಡಿರುವ ಆದಿಜಾಂಬವ ಜನಾಂಗದ ಅಭಿವೃದ್ಧಿಗಾಗಿ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಜ.17ರಂದು ಲೋಕಾರ್ಪಣೆಗೊಳ್ಳಲಿದೆ.
ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ ಮೈದಾನದಲ್ಲಿ ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿಗಮದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರು, ಶಾಸಕರು ಮತ್ತು ಮಾಜಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಗತಿ ಕಾಲನಿ’ ಲೋಕಾರ್ಪಣೆಗೊಳ್ಳಲಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನರು ಹೆಚ್ಚು ವಾಸಿಸುವ ಕಾಲನಿಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಒಳಚರಂಡಿ, ಸಂಪರ್ಕರಸ್ತೆ, ಅಂಗನವಾಡಿ ಕಟ್ಟಡ ಮುಂತಾದ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.
ಇದೇ ಸಂದರ್ಭದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಕೈಪಿಡಿ ಹಾಗೂ ಲಾಂಛನ ಬಿಡುಗಡೆ ಮಾಡಲಾಗುವುದು. ನಿಗಮ ಉದ್ಘಾಟನೆಗೊಳ್ಳುತ್ತಿರುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಎಸ್ಸಿ-ಎಸ್ಟಿ ವರ್ಗಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ಮೂಲಕ ಸಾಮಾಜಿಕವಾಗಿ ಬದಲಾವಣೆ ತರಲು ನಮ್ಮ ಸರಕಾರ ಬದ್ಧ ಎಂದು ಹೇಳಿದ್ದಾರೆ.
‘ಆದಿಜಾಂಬವ ಅಭಿವೃದ್ಧಿ ನಿಗಮ ಸ್ಥಾಪನೆಯ ಮೂಲಕ ನಮ್ಮ ಸರಕಾರ ಅವಕಾಶ ವಂಚಿತ ಸಮುದಾಯಗಳ ಅಭಿವೃದ್ಧಿಗಾಗಿ ಮತ್ತೊಂದು ಮಹತ್ತರ ನಿರ್ಧಾರ ಕೈಗೊಂಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಆಶಯಗಳಿಗನುಗುಣವಾಗಿ ನಿಗಮದ ಮೂಲಕ ಆದಿಜಾಂಬವ ಜನಾಂಗದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
‘ಪರಿಶಿಷ್ಟ ಜಾತಿಯ ಅಧಿಸೂಚನೆಯ ಆಧಾರದ ಮೇಲೆ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಒಡನಾಟ, ಸಾಂಪ್ರದಾಯಿಕ ಉದ್ಯೋಗ, ಪ್ರಾದೇಶಿಕ ಭಾಷೆಗಳು, ಹಬ್ಬಗಳ ಆಚರಣೆಗಳನ್ನು ಆಧರಿಸಿ ಆದಿಜಾಂಬವ ಜನಾಂಗವನ್ನು ಗುರುತಿಸಲಾಗಿದ್ದು, ಈ ಜನಾಂಗದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಆದಿಜಾಂಬವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗುತ್ತಿದೆ. ಈ ವರ್ಷ ನಿಗಮದ ಚಟುವಟಿಕೆಗಳಿಗಾಗಿ 306 ಕೋಟಿ ರೂ.ಅನುದಾನವನ್ನು ಮೀಸಲಿಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.