ಉಕ್ಕಿನ ಸೇತುವೆ ಯೋಜನೆ ಕೈಬಿಡುವಂತೆ ಸಿಪಿಐ ಒತ್ತಾಯ

Update: 2019-01-14 16:32 GMT

ಬೆಂಗಳೂರು, ಜ.14: ಉಕ್ಕಿನ ಸೇತುವೆ ಯೋಜನೆಯನ್ನು ಕೈಬಿಟ್ಟು, ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಭಾರತ ಕಮ್ಯನಿಸ್ಟ್ ಪಕ್ಷ, ಬೆಂಗಳೂರು ಜಿಲ್ಲಾ ಮಂಡಳಿ ಸಭೆಯಲ್ಲಿ ಒತ್ತಾಯಿಸಿದೆ.

ಇದೇ ಉಕ್ಕಿನ ಸೇತುವೆ ಯೋಜನೆಯನ್ನು ಮೂರು ವರ್ಷದ ಹಿಂದೆ ವಿರೋಧಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಈ ಯೋಜನೆಯನ್ನು ಮುಂದುವರಿಸಲು ನಿಂತಿದ್ದಾರೆ. ಹೀಗಾಗಿ, ಈ ಯೋಜನೆಯನ್ನು ಪುನರ್ ಜೀವಗೊಳಿಸುವ ರಾಜ್ಯ ಸರಕಾರದ ಪ್ರಯತ್ನಗಳನ್ನು ಸಿಪಿಐ ತೀವ್ರವಾಗಿ ವಿರೋಧಿಸುತ್ತದೆ ಎಂದು ಪಕ್ಷ ತಿಳಿಸಿದೆ.

ಇಂದು ನಮ್ಮ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಬೆಂಗಳೂರು ನಗರದ ಜನಸಂಖ್ಯೆ ಕಳೆದ 25 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಈ ಹೆಚ್ಚಳದ ಸರಿಸಮಾನವಾಗಿ ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೆಚ್ಚಾಗಿಲ್ಲ. ಇಂದು ನಗರದ ಜನಸಂಖ್ಯೆ 1 ಕೋಟಿಗಿಂತ ಹೆಚ್ಚಾಗಿದ್ದು, ಈ ಜನಸಂಖ್ಯೆ ಕೇವಲ 6,600 ಬಸ್ಸುಗಳಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಇಂದು ನಗರದಲ್ಲಿ ಶೇ.90 ರಷ್ಟು ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿವೆ. ಸರಕಾರ ಕೂಡಲೇ ಬಸ್ಸುಗಳ ಸಂಖ್ಯೆಯನ್ನು ದ್ವಿಗುಣ ಮಾಡಬೇಕು ಹಾಗೂ ನಮ್ಮ ಮೆಟ್ರೋದಲ್ಲಿ ಇರುವ ಬೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ. ಅಲ್ಲದೆ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವ ಸಾಮಾನ್ಯ ಜನರ ಸಮಸ್ಯೆಗಳನ್ನು ಬದಿಗಿಟ್ಟು, ಇಂದು ಸರಕಾರ ಖಾಸಗಿ ವಾಹನ ಮಾಲಕರಿಗಾಗಿ, ಮೇಲ್ವರ್ಗದ ಜನರ ಪರವಾಗಿ ಉಕ್ಕಿನ ಸೇತುವೆಯಂತೆ ದುಬಾರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪ ಮಾಡಿದೆ.

ಇಂದು ನಗರದ ಸಂಚಾರ ದಟ್ಟನೆಗೆ ಕಾರಣಗಳು ಕೇವಲ ಎರಡು. ಖಾಸಗಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ದುರ್ಬಲಗೊಳಿಸುವಿಕೆ. ಗಾಬರಿಗೊಳಿಸುವ ವಿಷಯವೇನೆಂದರೆ ಬೆಂಗಳೂರಿನಲ್ಲಿ ಪ್ರತಿ ವರ್ಷ ನಾಲ್ಕು ಲಕ್ಷಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ನೋಂದಾಯಿಸಲಾಗುತ್ತದೆ ಎಂಬ ಆತಂಕವನ್ನು ಸಿಪಿಎಂ ಹೊರಹಾಕಿದೆ.

ರಸ್ತೆ ವಿಸ್ತರಣೆ, ಹೊಸ ಮೇಲ್ಸೇತುವೆಗಳ ಬದಲಾಗಿ ಸರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಿದರೆ ಮಾತ್ರ ನಮ್ಮ ನಗರದ ಜನ ಸಾಮಾನ್ಯರ ಸಮಸ್ಯೆಗಳ ಜೊತೆಗೆ ಸಂಚಾರ ದಟ್ಟನೆ ನಿಯಂತ್ರಿಸಲು ಸಾಧ್ಯ. ಉಕ್ಕಿನ ಸೇತುವೆಯಂತಹ ಯೋಜನೆಗಳಿಂದ ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿ, ನಗರದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎಂದು ಸಭೆಯಲ್ಲಿ ಒಕ್ಕೊರಳಿನ ಧ್ವನಿಗೊಂಡಿಸಿದ್ದಾರೆ.

ಅಲ್ಲದೆ, ಬಿಬಿಎಂಪಿ ಈ ಕೂಡಲೇ ನಗರದ ಹಲವಾರು ಅಪೂರ್ಣ ಕೆಲಸಗಳಾದ ಓಕಲೀಪುರಂ ಸೇತುವೆ, ಶಿವಾನಂದ ವೃತ್ತದ ಸೇತುವೆ, ರಸ್ತೆ ಗುಂಡಿಗಳನ್ನು ಇತ್ಯಾದಿ ಕೆಲಸಗಳನ್ನು ಪೂರ್ಣಗೊಳಿಸುವತ್ತಾ ಗಮನ ಹರಿಸಬೇಕೆಂದು ಭಾರತ ಕಮ್ಯನಿಷ್ಟ್ ಪಕ್ಷ ತನ್ನ ಜಿಲ್ಲಾ ಮಂಡಳಿ ಸಭೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News