ಶುಚಿತ್ವದಲ್ಲಿ ಪೌರಕಾರ್ಮಿಕರ ಕೊಡುಗೆ ಅನನ್ಯ: ಶಾಸಕ ರಾಮಲಿಂಗಾರೆಡ್ಡಿ

Update: 2019-01-14 16:34 GMT

ಬೆಂಗಳೂರು, ಜ.14: ಸ್ವಚ್ಛತಾ ರಾಯಭಾರಿಗಳಾದ ಪೌರ ಕಾರ್ಮಿಕರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕೆಂದು ಶಾಸಕ ರಾಮಲಿಂಗಾರೆಡ್ಡಿ ಸಲಹೆ ಮಾಡಿದ್ದಾರೆ.

ಸೋಮವಾರ ಜೆಪಿ ನಗರದ ದುರ್ಗಾ ಪರಮೇಶ್ವರಿ ದೇವಸ್ಥಾನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐನೂರು ಕಾರ್ಮಿಕರಿಗೆ ಪೊಂಗಲ್ ಹಂಚಿದ ನಂತರ ಸೀರೆ, ರವಿಕೆ, ಪ್ಯಾಂಟ್ ಶರ್ಟ್ ಮತ್ತು ಉಡುಗೊರೆಗಳನ್ನು ವಿತರಿಸಿ ಮಾತನಾಡಿದ ಅವರು, ಸದಾ ಕಾಲ ಸ್ವಚ್ಛತೆ ಕೈಗೊಳ್ಳುವ ನಿಮಗೂ ಖುಷಿ ಸಿಗಬೇಕು ಎಂಬ ಕಾರಣದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶುಚಿತ್ವದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿಮ್ಮ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಸಂಕ್ರಾಂತಿ ಸಂತಸದ ಹಬ್ಬ, ಹೊಸ ವರ್ಷದ ಹೊಸ್ತಿಲಲ್ಲಿ ಬರುವ ಸಂಕ್ರಾಂತಿಯಲ್ಲಿ ನಗರವನ್ನು ಸುಂದರ, ಸ್ವಚ್ಛವಾಗಿಟ್ಟುಕೊಳ್ಳಲು ನಿಮ್ಮ ಪಾತ್ರ ಅನನ್ಯವಾದದು. ಅಲ್ಲದೆ, ನಿಮ್ಮ ಸುರಕ್ಷತೆ, ಆರೋಗ್ಯ ರಕ್ಷಣೆಗಾಗಿ ಸರಕಾರ ಮತ್ತು ಪಾಲಿಕೆ ಬದ್ಧವಾಗಿದೆ. ಹಳ್ಳಿಯ ನೆನಪು ತರುವ ಸಡಗರದ ಹಬ್ಬ ನಿಮ್ಮೆಲ್ಲರ ಬಾಳಿನಲ್ಲಿ ಬೆಳಕು ತರಲಿ ಎಂದು ಅವರು ಹಾರೈಸಿದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಸದಾ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ನಿಮ್ಮ ಜತೆ ಸಂಕ್ರಾಂತಿ ಆಚರಿಸುವುದು ಅರ್ಥಪೂರ್ಣವಾಗಿದೆ. ಎಲ್ಲರಿಗಿಂತ ನಿಮಗೆ ಸಂಕ್ರಾಂತಿ ಹಬ್ಬದ ಉಡುಗೊರೆ ನೀಡಿದರೆ ಅದು ಸಾರ್ಥಕತೆ ಪಡೆಯುತ್ತದೆ. ಜಯನಗರ ಅತ್ಯಂತ ಶುಚಿ ಸ್ಥಳವಾಗಬೇಕು ಎಂದು ತಿಳಿಸಿದರು.

ಅಲ್ಲದೆ, ಜಯನಗರ ಸ್ವಚ್ಛ ಭಾರತದಲ್ಲಿ ಉತ್ತಮ ಹೆಸರು ಪಡೆಯಬೇಕು. ಕಸದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಬೇಕು. ಅದಕ್ಕಾಗಿ ಯಾವುದೇ ರೀತಿಯ ಸಹಕಾರ ಬೇಕಾದರೂ ನೀಡುತ್ತೇವೆ. ಕಸ ವಿಂಗಡಣೆ ಇನ್ನಷ್ಟು ಸುಧಾರಿಸಬೇಕು. ಇದರ ಸಂಪೂರ್ಣ ಉಸ್ತುವಾರಿಯನ್ನು ತಾವೇ ವಹಿಸಬೇಕೆಂದು ಹೇಳಿದರು.

ಪಾಲಿಕೆ ಸದಸ್ಯ ನಾಗರಾಜು ಮಾತನಾಡಿ, ಬಾಂಧವ ಸಂಸ್ಥೆಯಿಂದ ಪ್ರತಿವರ್ಷ ಸಂಕ್ರಾಂತಿ ಸಂಭ್ರಮ ಏರ್ಪಡಿಸಲಾಗುತ್ತಿದೆ. ಈ ಬಾರಿ ಜಯನಗರ ಕ್ಷೇತ್ರದ ಏಳು ವಾರ್ಡ್‌ಗಳ ಪೌರ ಕಾರ್ಮಿಕರು ಒಂದೇ ಕಡೆ ಸೇರಿರುವುದು ಉತ್ತಮ ಬೆಳವಣಿಗೆ. ಇದರಿಂದ ಪರಸ್ಪರ ಬಾಂಧವ್ಯ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಪಾಲಿಕೆ ಸದಸ್ಯರಾದ ನಾಗರಾಜ್, ಮಾಜಿ ಮೇಯರ್ ಎಸ್.ಕೆ.ನಟರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News