ತಾಂತ್ರಿಕ ಕಾಲೇಜುಗಳಲ್ಲಿ ಉತ್ತಮ ಶಿಕ್ಷಕರಿಲ್ಲ: ಗಾಂಧಿ ಸ್ಮಾರಕನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ

Update: 2019-01-14 16:36 GMT

ಬೆಂಗಳೂರು, ಜ.14: ರಾಜ್ಯದ ವಿವಿಧ ತಾಂತ್ರಿಕ ಕಾಲೇಜುಗಳಲ್ಲಿ ಉತ್ತಮ ಶಿಕ್ಷಕರಿಲ್ಲದೇ, ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಗಾಂಧಿ ಸ್ಮಾರಕನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ ವಿಷಾದ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಶೇಷಾದ್ರಿಪುರ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕ್ಯೂಬರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ಪಿಯುಸಿ ಪೂರ್ಣಗೊಳಿಸಿ ಇಂಜಿನಿಯರಿಂಗ್ ಕೋರ್ಸ್ ಸೇರುತ್ತಾರೆ. ಆದರೆ ಅವರಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಡಿಮೆ ಇದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕಿದೆ. ವಿದ್ಯಾರ್ಥಿಗಳು ಕೇವಲ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡದೆ, ಪ್ರತಿನಿತ್ಯ ಪರೀಕ್ಷೆಗೆ ತಾಲೀಮು ನಡೆಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವುದರ ಕಡೆಗೆ ಗಮನ ಹರಿಸಬೇಕು ಎಂದರು.

ಕ್ಯೂಬರ್: ಕ್ವೆಶನ್ಸ್ ಬೌಲಿಂಗ್ ರೂಮ್ಸ್ ಫಾರ್ ಪಿಯು ಬೋರ್ಡ್ ಎಕ್ಸಾಂ (ಕ್ಯೂಬರ್) ಪಿಯುಸಿ ವಿದ್ಯಾರ್ಥಿಗಳಿಗೆಂದೇ ಸಿದ್ಧಪಡಿಸಿದ ವಿಶೇಷ ವ್ಯವಸ್ಥೆಯಾಗಿದೆ. ಇಂಟರ್‌ನೆಟ್ ಬಳಸಿ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ಬಿಂಬ ಆ್ಯಪ್‌ನ ಪ್ಲೋ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ: ಜನವರಿಯಿಂದ ಪ್ರತಿನಿತ್ಯ ಬಳಸಬಹುದಾಗಿದೆ. ಕಲೆ ವಿಜಾನ್ಞ ಮತ್ತು ವಾಣಿಜ್ಯ ವಿಷಯಗಳ ಆಧಾರದ ಮೇಲೆ ಪ್ರತಿದಿನ ಸಂಜೆ 6ಕ್ಕೆ ಸರಿಯಾಗಿ ಸಂಭಾವ್ಯ ಪ್ರಶ್ನೆಗಳನ್ನು ಒದಗಿಸಲಾಗುವುದು. ವಿದ್ಯಾರ್ಥಿಗಳು ಇದಕ್ಕೆ ಉತ್ತರ ನೀಡಿದ ಮೇಲೆ ಉತ್ತರವನ್ನು ಪರಿಣಿತರು ಪರಿಶೀಲಿಸಿ ಉತ್ತರ ತಿಳಿಸುತ್ತಾರೆ. ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಆ್ಯಪ್ ಬಳಕೆ ಉಚಿತವಾಗಿದ್ದು ರಾಜ್ಯಾದ್ಯಂತ ಕಾಲೇಜಿನ ವಿದ್ಯಾರ್ಥಿಗಳು ಬಳಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ https://onbimba.com/qber ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News