ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಲಿಖಿತ್‌ಗೆ 3 ಚಿನ್ನ

Update: 2019-01-14 18:32 GMT

ಪುಣೆ, ಜ.14: ಖೇಲೊ ಇಂಡಿಯಾ ಗೇಮ್ಸ್‌ನಲ್ಲಿ ಕರ್ನಾಟಕ ಸೋಮವಾರ ಮುನ್ನಡೆ ಕಂಡರೂ ಒಟ್ಟಾರೆ ಪದಕಪಟ್ಟಿಯಲ್ಲಿ ಮಹಾರಾಷ್ಟ್ರ 59 ಚಿನ್ನ, 48 ಬೆಳ್ಳಿ ಹಾಗೂ 59 ಕಂಚು ಸೇರಿದಂತೆ 166 ಪದಕ ಪಡೆದು ಅಗ್ರಸ್ಥಾನದಲ್ಲಿ ಅಬಾಧಿತವಾಗಿದೆ. 25 ಬಂಗಾರ, 22 ಬೆಳ್ಳಿ ಹಾಗೂ 13 ಕಂಚಿನ ಪದಕಗಳನ್ನು ಗೆದ್ದ ಕರ್ನಾಟಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಸೋಮವಾರ ನಡೆದ ಈಜು ಸ್ಪರ್ಧೆಗಳಲ್ಲಿ ಒಟ್ಟು 15 ಪದಕಗಳಲ್ಲಿ ಕರ್ನಾಟಕ 6 ಪದಕಗಳನ್ನು ಬಾಚಿಕೊಂಡಿತು. ಎಸ್.ಪಿ. ಲಿಖಿತ್ 50 ಮೀ. ಫ್ರೀ ಸ್ಟೈಲ್ ಹಾಗೂ 50 ಮೀ. ಬ್ರೀಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಸೋಮವಾರ ಚಿನ್ನದ ಪದಕ ಪಡೆದರು. 4x100 ಮೀ. ಫ್ರೀ ಸ್ಟೈಲ್‌ನಲ್ಲೂ ಅವರು ಚಿನ್ನಕ್ಕೆ ಮುತ್ತಿಟ್ಟರು. ಅಲ್ಲದೆ ಈಗಾಗಲೇ ಅವರು 100 ಮೀ. ಬ್ರೀಸ್ಟ್ ಸ್ಟ್ರೋಕ್ ಮತ್ತು 4x100 ಮೀ. ಮೆಡ್ಲೆ ವಿಭಾಗದಲ್ಲಿ ಬಂಗಾರ ಗೆದ್ದುಕೊಂಡಿದ್ದಾರೆ.

ಲಿಖಿತ್ ಅವರ ತಂಡದ ಸಹ ಆಟಗಾರ ಶ್ರೀ ಹರಿ ನಟರಾಜ್ ಕೂಡ ಸೋಮವಾರ ನಡೆದ ರಿಲೇಯಲ್ಲಿ 5 ಪದಕಗಳನ್ನು ಪಡೆದುಕೊಂಡರು.

ಮಹಾರಾಷ್ಟ್ರ ಮತ್ತು ತಮಿಳುನಾಡು ತಲಾ 2 ಬಂಗಾರ ಗೆದ್ದರೆ , ಹರ್ಯಾಣ, ದಿಲ್ಲಿ, ರಾಜಸ್ಥಾನ, ಕೇರಳ, ಮತ್ತು ಉತ್ತರಪ್ರದೇಶ ಒಂದೊಂದು ಚಿನ್ನದ ಪದಕ ಜಯಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News