​ಮಹಿಳೆ ಜತೆ ಪಾಕ್ ಸಿಬ್ಬಂದಿ ಅಸಭ್ಯ ವರ್ತನೆ: ದೂರು

Update: 2019-01-15 03:55 GMT

ಹೊಸದಿಲ್ಲಿ, ಜ. 15: ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿಯೊಬ್ಬರು ಇಲ್ಲಿನ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ. ಸ್ಥಳೀಯ ಆಡಳಿತದ ಕಿರುಕುಳ ಬಗ್ಗೆ ಉಭಯ ದೇಶಗಳು ಪರಸ್ಪರ ಆರೋಪ ಮಾಡಿಕೊಂಡಿವೆ.

ಪಾಕಿಸ್ತಾನದ ರಾಜತಾಂತ್ರಿಕ ಸಿಬ್ಬಂದಿಯನ್ನು ಬಂಧಿಸುವ ಮೂಲಕ ರಾಜತಾಂತ್ರಿಕ ಸಂಬಂಧ ಕುರಿತ ವಿಯೆನ್ನಾ ಒಪ್ಪಂದವನ್ನು ಭಾರತ ಉಲ್ಲಂಘಿಸಿದೆ ಎನ್ನುವುದು ಪಾಕಿಸ್ತಾನದ ಆರೋಪ. ಆದರೆ ಭಾರತೀಯ ರಾಜತಾಂತ್ರಿಕರ ಇ-ಮೇಲ್ ಮತ್ತು ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡುವುದೂ ಸೇರಿದಂತೆ ಇಸ್ಲಾಮಾಬಾದ್ ಭಾರತೀಯ ರಾಜತಾಂತ್ರಿಕ ಸಿಬ್ಬಂದಿಗೆ ಕಿರುಕುಳ ನೀಡುತ್ತಿದೆ ಎಂದು ಭಾರತ ಆಪಾದಿಸಿದೆ.

ಪಾಕಿಸ್ತಾನ ರಾಜತಾಂತ್ರಿಕ ಸಿಬ್ಬಂದಿಯೊಬ್ಬರು ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಆತ ಮಹಿಳೆಗೆ ಲಿಖಿತ ಕ್ಷಮೆಯಾಚನೆ ಪತ್ರ ನೀಡಿದ ಬಳಿಕ ಬಿಡುಗಡೆ ಮಾಡಲಾಗಿದೆ. ಆ ಬಳಿಕ ಮಹಿಳೆ ಆತನ ವಿರುದ್ಧ ಕ್ರಮಕ್ಕೆ ಒತ್ತಾಯಿಸದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಪಾಕಿಸ್ತಾನಿ ಸಿಬ್ಬಂದಿಯನ್ನು ಶೌಕತ್ ಎಂದು ಗುರುತಿಸಲಾಗಿದ್ದು, ನೌಕಾ ಸಲಹೆಗಾರರ ಸಹಾಯಕನಾಗಿ ಈತ ಕಾರ್ಯ ನಿರ್ವಹಿಸುತ್ತಿದ್ದ. ಶನಿವಾರ ಸಂಜೆ ಜನದಟ್ಟಣೆಯ ಮಳಿಗೆಯೊಂದರಲ್ಲಿ ಈತ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದ ಎಂದು ದೆಹಲಿ ವಿವಿ ವಿದ್ಯಾರ್ಥಿನಿಯೊಬ್ಬರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಒಂದು ಗಂಟೆ ಕಾಲ ಈತನನ್ನು ಪೊಲೀಸರು ಬಂಧನದಲ್ಲಿಟ್ಟಿದ್ದರು. ಈ ಕ್ರಮವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕಟುವಾಗಿ ಟೀಕಿಸಿದ್ದು, ಇದು ರಾಜತಾಂತ್ರಿಕ ಸಂಬಂಧ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವಿಕೆ ಕುರಿತ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News