ಟ್ರಂಪ್‌ರ ಜನನ ನಿಯಂತ್ರಣ ನೀತಿಗೆ ದೇಶವ್ಯಾಪಿ ತಡೆಯಾಜ್ಞೆ

Update: 2019-01-15 15:01 GMT

ಹ್ಯಾರಿಸ್‌ಬರ್ಗ್ (ಅಮೆರಿಕ), ಜ. 15: ಜನನ ನಿಯಂತ್ರಣಕ್ಕೆ ಸಂಬಂಧಿಸಿದ ಆರೋಗ್ಯ ವಿಮೆ ಸೌಲಭ್ಯವನ್ನು ನೀಡುವುದರಿಂದ ಹಿಂದೆ ಸರಿಯಲು ಉದ್ಯೋಗದಾತರಿಗೆ ಅವಕಾಶ ನೀಡುವ ಟ್ರಂಪ್ ಸರಕಾರದ ನೀತಿಗಳಿಗೆ ಫೆಡರಲ್ ನ್ಯಾಯಾಧೀಶರೊಬ್ಬರು ಸೋಮವಾರ ದೇಶವ್ಯಾಪಿ ತಡೆಯಾಜ್ಞೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಸರಕಾರದ ನೂತನ ನೀತಿಗಳು ಜಾರಿಗೊಂಡರೆ ರಾಜ್ಯಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಾದಿಸುವ ಅರ್ಜಿಯೊಂದರ ಬಗ್ಗೆ ಫಿಲಡೆಲ್ಫಿಯದ ಜಿಲ್ಲಾ ನ್ಯಾಯಾಧೀಶೆ ವೆಂಡಿ ಬೀಟಲ್‌ಸ್ಟೋನ್ ಸಹಮತ ವ್ಯಕ್ತಪಡಿಸಿದರು. ಈ ಅರ್ಜಿಯನ್ನು ಪೆನ್ಸಿಲ್ವೇನಿಯ ರಾಜ್ಯವು ಮೊದಲು ಸಲ್ಲಿಸಿತ್ತು.

ಹಲವಾರು ನಾಗರಿಕರು ಗರ್ಭನಿರೋಧಕ ಸೌಲಭ್ಯಗಳನ್ನು ಕಳೆದುಕೊಳ್ಳಬಹುದು ಹಾಗೂ ಇದರಿಂದಾಗಿ ಸರಕಾರಿ ಗರ್ಭನಿರೋಧಕ ಸೇವೆಗಳಿಗೆ ಮೊರೆಹೋಗುವವರ ಸಂಖ್ಯೆ ಹೆಚ್ಚಾಗಬಹುದು ಎಂದು ನ್ಯಾಯಾಧೀಶರು ಹೇಳಿದರು.

ಅಂತಿಮವಾಗಿ ಇದು ಸರಕಾರದ ಖರ್ಚನ್ನು ಹೆಚ್ಚಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ರವಿವಾರ, ಪ್ರಾಥಮಿಕ ತಡೆಯಾಜ್ಞೆ ನೀಡಬೇಕೆಂದು ಕೋರಿ ಡೆಮಾಕ್ರಟಿಕ್ ಸರಕಾರಗಳ 14 ಅಟಾರ್ನಿ ಜನರಲ್‌ಗಳು ಸಲ್ಲಿಸಿದ ಮನವಿಯನ್ನು ಓಕ್‌ಲ್ಯಾಂಡ್ ನಗರದ ಜಿಲ್ಲಾ ನ್ಯಾಯಾಧೀಶ ಹೇವುಡ್ ಗಿಲಿಯಮ್ ಪುರಸ್ಕರಿಸಿರುವುದನ್ನು ಸ್ಮರಿಸಬಹುದಾಗಿದೆ.

‘ಒಬಾಮ ಕೇರ್’ ಆರೋಗ್ಯ ಕಾರ್ಯಕ್ರಮದ ಜನನ ನಿಯಂತ್ರಣಕ್ಕೆ ಸಂಬಂಧಿಸಿದ ಅಗತ್ಯಗಳಿಗೆ ನೈತಿಕ ಮತ್ತು ಧಾರ್ಮಿಕ ನೆಲೆಗಳಲ್ಲಿ ವಿನಾಯಿತಿಗಳನ್ನು ಪಡೆಯಲು ವ್ಯಾಪಾರಿ ಅಥವಾ ಲಾಭರಹಿತ ಸಂಸ್ಥೆಗಳಿಗೆ ಟ್ರಂಪ್ ಸರಕಾರದ ನಿಯಮಗಳು ಅವಕಾಶ ಮಾಡಿಕೊಡುತ್ತವೆ.

ನಿಯಮಗಳು ಜನವರಿ 14ರಿಂದ ಜಾರಿಗೆ ಬರಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News