ಬುಡಕಟ್ಟು ಸಮುದಾಯಗಳ ಅರಣ್ಯ ರೋದನ

Update: 2019-01-15 18:33 GMT

ಇಂದು ರಾಜ್ಯವನ್ನೂ ಒಳಗೊಂಡಂತೆ ದೇಶದಲ್ಲಿ ಅದೆಷ್ಟೋ ಬುಡಕಟ್ಟು ಸಮುದಾಯಗಳಿವೆ. ಕೆಲವೊಂದು ಸಮುದಾಯಗಳು ಕಾಡಿನಿಂದ ಹೊರತಾಗಿ ನಾಡಿನೊಟ್ಟಿಗೆ ಬೆರೆತಿದ್ದರೆ ಕೆಲವು ಇನ್ನೂ ಅಜ್ಞಾತವಾಗಿವೆ. ಮತ್ತೊಂದಿಷ್ಟು ಕೆಲವರ ಜಾಣ ಕಿವುಡು, ಜಾಣ ಕುರುಡಿನಿಂದಾಗಿ ಒದ್ದಾಡುತ್ತಿವೆ. ಅಂತಹುದೇ ಒಂದು ಬುಡಕಟ್ಟು ಮೇದರ ಸಮುದಾಯ. ಮೂಲತ ಅರಣ್ಯೋತ್ಪನ್ನಗಳ ಬದುಕಿಗೆ ಹತ್ತಿರವಾದ ಇವರು ಇಂದು ಕರ್ನಾಟಕದ ರಾಮನಗರ, ಹಲಗೂರು, ಮಳವಳ್ಳಿ, ಮುತ್ತತ್ತಿ, ಬೆಂಗಳೂರು ಮುಂತಾದೆಡೆ ವಿವಿಧ ಕಾರಣಗಳಿಂದ ಹಂಚಿಹೋಗಿದ್ದಾರೆ. ನಗರ ಹಾಗೂ ನಗರ ನಾಗರಿಕತೆಗೆ ಹತ್ತಿರವಾಗುತ್ತಿದ್ದಂತೆ ಈ ಸಮುದಾಯಗಳಲ್ಲೂ ಬದಲಾವಣೆಗಳಾಗಿರುವುದು ಸ್ಪಷ್ಟ. ಆದರೆ ಇಂದಿಗೂ ಮೇದರ ಸಮುದಾಯಗಳು ಮೇಲ್ವರ್ಗ, ಸರಕಾರ, ಅಧಿಕಾರಶಾಹಿಗಳ ಅಸಡ್ಡೆಗೆ ಗುರಿಯಾಗಿವೆ. ಅದರಲ್ಲಿ ಮೇದರದೊಡ್ಡಿ(ಹೊಸದೊಡ್ಡಿ)ಯ ಮೇದ ಸಮುದಾಯವೂ ಒಂದು.

ರೇಷ್ಮೆನಾಡು, ಜಿಲ್ಲಾಕೇಂದ್ರ ರಾಮನಗರಕ್ಕೆ 25 ಕಿ.ಮೀ. ದೂರದಲ್ಲಿರುವ ಕನಕಪುರ ತಾಲೂಕಿನ ಮೇದರದೊಡ್ಡಿ ಸುಮಾರು 50 ಕುಟುಂಬಗಳ ಗ್ರಾಮ. ಇಲ್ಲಿನ ಬಹುಪಾಲು ಮಂದಿ ಅನಕ್ಷರಸ್ಥರು. ಮತ್ತೆ ಕೆಲವರು ಅರ್ಧಕ್ಕೇ ಓದು ಬಿಟ್ಟವರು. ಕೃಷಿ ಇವರ ಜೀವನವೃತ್ತಿ. ಬಿದಿರಿನಿಂದ ಚಾಪೆ, ತಟ್ಟೆ, ಬುಟ್ಟಿ, ಪಂಜರ ಮುಂತಾದವುಗಳನ್ನು ಹೆಣೆಯುವುದು ಸಾಂಪ್ರದಾಯಿಕ ಕಸುಬು. ಇದು ತಾಳ್ಮೆ, ಕ್ರಿಯಾಶೀಲತೆ, ಅಧಿಕ ಸಮಯ, ನಿಪುಣತೆಯನ್ನು ಬೇಡುವ ಕೆಲಸ. ಆದರೆ ಅರಣ್ಯ ನಾಶದ ಮುಖ್ಯ ರೂವಾರಿಗಳೆಂದು ಆರೋಪಿಸಿ ಇಂದು ಆ ವೃತ್ತಿಗೂ ಎಳ್ಳು-ನೀರು ಬಿಡುವ ಪರಿಸ್ಥಿತಿ ಬಂದಿದ್ದು ಇಲ್ಲಿನ ಹಲವಾರು ಮಂದಿ ಇಂದು ಸಣ್ಣಪುಟ್ಟ ಕೂಲಿ ಕೆಲಸಕ್ಕಷ್ಟೆ ಸೀಮಿತವಾಗಿದ್ದರೆ ಹಲವರು ನಿರುದ್ಯೋಗಿಗಳು.

ಜಿಲ್ಲಾ ಕೇಂದ್ರದಿಂದ 25 ಹಾಗೂ ತಾಲೂಕು ಕೇಂದ್ರದಿಂದ ಕೇವಲ 18 ಕಿ.ಮೀ. ದೂರದಲ್ಲಿರುವ ಈ ಹಳ್ಳಿಗೆ ಇಂದಿಗೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಸರಕಾರದ ಅಭಿವೃದ್ಧಿಯ ಬಹುದೊಡ್ಡ ಅಣಕ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಯೇನೋ ನಿರ್ಮಾಣ ವಾಗಿದೆ. ಆದರೆ ಸಾರಿಗೆ ವ್ಯವಸ್ಥೆಯೇ ಇಲ್ಲದ ಅದರ ಪರಿಣಾಮ ಮಹತ್ವದ್ದೆನಿಸುತ್ತದೆಯೇ? ಮಾತ್ರವಲ್ಲದೆ ಇಲ್ಲಿನ ಜನ ಬಸ್ಸಿಗಾಗಿ ಅಕ್ಕಪಕ್ಕದ ಹಳ್ಳಿಗಳಿಗೆ ಸುಮಾರು ಮೈಲಿಗಳು ನಡೆದುಕೊಂಡೇ ಹೋಗಬೇಕು. ಮೇದರದೊಡ್ಡಿಯ ಸುತ್ತಮುತ್ತಲೆಲ್ಲಾ ಬೆಟ್ಟಗುಡ್ಡ, ಅರಣ್ಯವೇ ಇದೆ. ಒಂದು ವೇಳೆ ತಡವಾದರೆ ಇವುಗಳ ಮಧ್ಯದಲ್ಲೇ ನಡೆದುಕೊಂಡೇ ಹೋಗಬೇಕು. ಕರಡಿ, ಚಿರತೆ, ಹಂದಿ, ಆನೆಗಳ ಕಾಟವೂ ಜೋರಾಗಿಯೇ ಇದೆ. ಯಾವ ಕ್ಷಣದಲ್ಲಾದರೂ ಅವುಗಳು ಮೇಲೆರಗಬಹುದಾದ ಭೀತಿಯಲ್ಲಿಯೇ ನಡೆದಾಡಬೇಕು. ವಿಪರ್ಯಾಸವೆಂದರೆ ಪಕ್ಕದ ಹಳ್ಳಿಗಳಿಗೆ ಬರುವ ಬಸ್ಸುಗಳು ಈ ಊರಿಗೆ ಬರುತ್ತಿಲ್ಲ. ಯಾವೊಬ್ಬ ಶಾಸಕ, ಸಚಿವ, ಅಧಿಕಾರಿಯೂ ಈ ಬಗ್ಗೆ ಗಮನ ಹರಿಸಿಲ್ಲ. ಅಲ್ಲದೆ ಕಾಡುಪ್ರಾಣಿಗಳ ದಾಳಿಗೆ ಸಿಕ್ಕು ಸತ್ತವರ ನಿದರ್ಶನಗಳು ಇನ್ನೂ ಜೀವಂತವಾಗಿವೆ.

ಕರ್ನಾಟಕವನ್ನು ಒಳಗೊಂಡಂತೆ ಭಾರತ ಅಭಿವೃದ್ಧಿಯಾಗುತ್ತಿದೆ ಎಂದು ಸರಕಾರಗಳು ಜಾಗತಿಕ ಮಟ್ಟದಲ್ಲಿ ಒಣಜಂಭ ಪ್ರದರ್ಶಿಸುತ್ತಿವೆ. ಹಳ್ಳಿಗಳ, ತಳಸಮುದಾಯಗಳ, ಬುಡಕಟ್ಟು ಜನತೆಯ ಅಭಿವೃದ್ಧಿಯಾಗದ ಹೊರತು ರಾಜ್ಯದ ಅಥವಾ ದೇಶದ ಅಭಿವೃದ್ಧಿ ಕೇವಲ ನೀರ ಮೇಲಿನ ಗುಳ್ಳೆಯಂತೆ. ಎಲ್ಲಾ ಸೌಲಭ್ಯಗಳು ಕೆನೆಪದರದ ಸಮುದಾಯಗಳ ಪಾಲಾಗುತ್ತಿರುವುದು ಕಳವಳಕಾರಿ ಸಂಗತಿ. ಇಂದು ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಕೆಎಸ್ಸಾರ್ಟಿಸಿ ತನ್ನ ದಕ್ಷ ಸೇವೆಗಾಗಿ ಪ್ರಶಸ್ತಿಗಳನ್ನು ಪಡೆಯುತ್ತಲೇ ಇದೆ. ನೈಜತೆಯ ದುರ್ಬೀನಿನಲ್ಲಿ ನೋಡಿದರೆ ಇದೆಲ್ಲಾ ಕೇವಲ ಮೇಲ್ನೋಟದ ಸಾಧನೆಯಲ್ಲದೆ ಮತ್ತೇನು? ಈ ದಿನಕ್ಕೂ ಮೇದರದೊಡ್ಡಿಯಂತಹ ಅದೆಷ್ಟೋ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ, ಕುಡಿಯುವ ನೀರಿಲ್ಲ, ವಿದ್ಯುಚ್ಛಕ್ತಿಯಿಲ್ಲ, ಆಸ್ಪತ್ರೆಯಿಲ್ಲ. ಇನ್ನು ಸಾಂಪ್ರದಾಯಿಕ ವೃತ್ತಿಯ ವಿಚಾರದಲ್ಲಿ ಸಲ್ಲದ ನೆಪವೊಡ್ಡಿ ಅದನ್ನು ಬಲಿಕೊಡಲಾಗಿದೆ. ತೋಳ್ಬಲ, ಜನಬಲ, ಹಣಬಲ ಇರುವವರು ಅರಣ್ಯ ಸಂಪನ್ಮೂಲಗಳನ್ನು ದಿನನಿತ್ಯ ಲೂಟಿ ಮಾಡುತ್ತಲೇ ಇದ್ದಾರೆ. ಆದರೆ ಜೀವನೋಪಾಯಕ್ಕಾಗಿ ಮಾಡುತ್ತಿದ್ದ ಕಸುಬಿಗೆ ಈ ಮುಗ್ಧಜನತೆಯ ಅರಣ್ಯ ಪ್ರವೇಶಕ್ಕೆ ನಿರ್ಬಂಧ ಹೇರಿ ಕರಕುಶಲತೆಯನ್ನು ಅಕ್ಷರಶಃ ಕೊಲೆ ಮಾಡಲಾಗಿದೆ. ನಮಗೆಲ್ಲಾ ಅವರು ತಯಾರಿಸಿದ ಏಣಿ ಬೇಕು, ಬೆತ್ತದ ಕುರ್ಚಿ-ಮೇಜುಗಳು ಬೇಕು, ಆಕರ್ಷಕ ಚಿತ್ತಾರದ ಸಾಮಗ್ರಿಗಳು ಬೇಕು. ಆದರೆ ಅವರ ವೃತ್ತಿಯನ್ನು ಪ್ರೋತ್ಸಾಹಿಸುವ ಆಸಕ್ತಿ ಇಲ್ಲ.

2005ರಲ್ಲಿ ಸುಮಾರು ಶೇ. 95ರಷ್ಟು ಮೇದರು ಈ ಕಸುಬುದಾರರಾಗಿದ್ದರು. ಆದರೆ ಇಂದು ಇದರ ಪ್ರಮಾಣ ಶೇ. 5ರಷ್ಟು ಎಂಬುದು ಕಹಿಸತ್ಯ. ಕಾರಣ ಪ್ರೋತ್ಸಾಹ, ಬೇಡಿಕೆ, ಸಹಾಯಧನ, ಯೋಜನೆಗಳ ಕೊರತೆ. ಭಾರತ ವೈವಿಧ್ಯತೆಗಳ ತವರೂರೆಂದು ವಿಶ್ವಮಟ್ಟದಲ್ಲಿ ಪ್ರಸಿದ್ಧ್ದಿ. ಆದರೆ ಹುಡುಕಿದಂತೆಲ್ಲಾ ವೈವಿಧ್ಯತೆಗಳು ಕ್ಷೀಣಿಸುತ್ತಾ ಬಂದಿವೆ. ನಾಗರಿಕತೆ, ಆಧುನಿಕತೆ, ಕೈಗಾರಿಕೀಕರಣದ ಹೊಡೆತಕ್ಕೆ ಸಿಕ್ಕ ಎಷ್ಟೋ ಕರಕುಶಲ ವೃತ್ತಿಗಳು ನೆಲೆ ಕಳೆದುಕೊಳ್ಳುತ್ತಿವೆ. ಈ ಊರಿನ ಜನ ಬೆಳೆದ, ತಯಾರಿಸಿದ ವಸ್ಥುಗಳನ್ನು ಸಾಗಿಸಲು ಸಹ ಸಾರಿಗೆಗಾಗಿ ಬಹುದೂರ ನಡೆಯಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ರಾಜಕೀಯ ಮುಖಂಡರೊಬ್ಬರು ಬುಡಕಟ್ಟು ಜನರ ಕುರಿತಂತೆ ‘‘ಅವರೂ ಕಾರಿನಲ್ಲಿ, ಬೈಕಿನಲ್ಲಿ, ಓಡಾಡಬೇಕು, ಒಳ್ಳೊಳ್ಳೆ ಬಟ್ಟೆ ಹಾಕಬೇಕು, ವಿಮಾನಯನ ಮಾಡಬೇಕು’’ ಎಂದೇನೇನೊ ಹೇಳುತ್ತಿದ್ದರು. ವಿಚಾರ ಸರಿಯಾದುದೇ. ಆದರೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸದಿರುವ ಪರಿಸ್ಥಿತಿಯಲ್ಲಿ ವಿಮಾನಯಾನ ಗಗನಕುಸುಮವಲ್ಲವೇ? ಮಾನವ ಸಮುದಾಯಕ್ಕೆ ಮೊದಲು ಬೇಕಿರುವುದು ಕನಿಷ್ಠ ಮೂಲಭೂತ ಅವಶ್ಯಗಳಾದ ನೀರು, ವಸತಿ, ಆರೋಗ್ಯ, ಔಷಧಿ, ವಿದ್ಯುತ್, ಸಾರಿಗೆ, ಶಿಕ್ಷಣ, ಬಟ್ಟೆ ಮುಂತಾದವು. ಇವುಗಳ ಪೂರೈಕೆಯಲ್ಲಿ ಕೊರತೆಯಾದರೆ ಅದು ಅಸಮಾನತೆಯ ಸೂಚಕ. ಚುನಾವಣಾ ಸಂದರ್ಭದಲ್ಲಿ ಮತಗಳಿಕೆಗಾಗಿ ಭರಪೂರ ಆಶ್ವಾಸನೆ, ಭರವಸೆ ನೀಡುವ ಮುಖಂಡರು, ಗೆದ್ದ ನಂತರ ಮರಳಿ ಬರುವುದು ಮುಂದಿನ ಚುನಾವಣೆಗೆ. ಅಲ್ಲಿಯವರೆಗೆ ಈ ಊರೇ ನೆನಪಾಗುವುದಿಲ್ಲ.

ಅಭಿವೃದ್ಧಿ, ಬೆಳವಣಿಗೆ ಎಂಬುದೆಲ್ಲಾ ಕೇವಲ ಪಟ್ಟಭದ್ರ ಹಿತಾಸಕ್ತಿಗಳ ನಿರ್ದೇಶನದ ಮೇರೆಗೆ ನಡೆಯುತ್ತಿದೆ. ಅಂಚಿಗೆ ತಳ್ಳಲ್ಪಟ್ಟ ವರ್ಗ ಸಮುದಾಯಗಳ ಪಾಡು ಅರಣ್ಯರೋದನ. ಮೇಲ್ನೋಟಕ್ಕೆ ಕೆಲವರಿಗೆ ಸಾರಿಗೆ ಸಮಸ್ಯೆ ಯಕಃಶ್ಚಿತ್ ಎನ್ನಿಸಬಹುದು. ಆದರೆ ಶಾಲೆಗೆ ತಡವಾಗುವ ಮಕ್ಕಳು, ಮೈಲಿಗಟ್ಟಲೆ ನಡೆಯುವ ವೃದ್ಧರು, ಕಾಡು ಪ್ರಾಣಿಗಳಿಗೆ ಹೆದರಿ ಜೀವ ಅಂಗೈಯಲ್ಲಿ ಹಿಡಿದು ಓಡಾಡುವ ಹೆಂಗಸರಿಗೆ ಅದು ಬಹು ದೊಡ್ಡ ಸಮಸ್ಯೆ. ಕಾರು ಸ್ಕೂಟರ್‌ಗಳನ್ನು ಕೊಂಡುಕೊಳ್ಳುವ ಅನುಕೂಲವಂತರನ್ನು ಹೊರತುಪಡಿಸಿದರೆ ಸಾರ್ವಜನಿಕ ಸಾರಿಗೆಯನ್ನೇ ನೆಚ್ಚಿ ಪ್ರಯಾಣಿಸುವ ಜನತೆಯ ಗೋಳು ಇಂದು ನಿನ್ನೆಯದಲ್ಲ. ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಯಾಗಿದ್ದರೂ ಇಂತಹ ಕುಗ್ರಾಮಗಳಿಗೆ ಒಂದು ಬಸ್ಸು ಬಾರದಿರುವುದು ವಿಪರ್ಯಾಸವಲ್ಲವೇ? 

Writer - ಪ್ರದೀಪ ಟಿ. ಕೆ.

contributor

Editor - ಪ್ರದೀಪ ಟಿ. ಕೆ.

contributor

Similar News