ಏಳನೇ ಪ್ರಶಸ್ತಿಗಾಗಿ ಜೊಕೊವಿಕ್ ಅಭಿಯಾನ ಆರಂಭ

Update: 2019-01-15 18:48 GMT

ಮೆಲ್ಬೋರ್ನ್, ಜ.15: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಜಯ ಸಾಧಿಸುವುದರೊಂದಿಗೆ ಏಳನೇ ಪ್ರಶಸ್ತಿಗಾಗಿ ತನ್ನ ಅಭಿಯಾನ ಆರಂಭಿಸಿದರು.

ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜೊಕೊವಿಕ್ 230ನೇ ರ್ಯಾಂಕಿನ ಅಮೆರಿಕದ ಮಿಚೆಲ್ ಕ್ರುಗೆರ್‌ರನ್ನು 6-3, 6-2, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಸತತ 13ನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು. 300ನೇ ಗ್ರಾನ್‌ಸ್ಲಾಮ್ ಪಂದ್ಯವನ್ನಾಡಿದ ಜೊಕೊವಿಕ್ 259ನೇ ಗೆಲುವು ದಾಖಲಿಸಿದರು. ಜೊಕೊವಿಕ್ ಎರಡನೇ ಸುತ್ತಿನಲ್ಲಿ ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗರನ್ನು ಎದುರಿಸಲಿದ್ದಾರೆ.

►ಸೋಲಿನ ಭೀತಿಯಿಂದ ಹೊರ ಬಂದ ಹಾಲೆಪ್ ಎರಡನೇ ಸುತ್ತಿಗೆ

ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ರೊಮಾನಿಯ ಆಟಗಾರ್ತಿ ಸಿಮೊನಾ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಕೈಯಾ ಕನೆಪಿ ವಿರುದ್ಧ 6-7(2/7), 6-4, 6-2 ಅಂತರದಿಂದ ಜಯ ಸಾಧಿಸಿದರು. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದ ಹಾಲೆಪ್ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. ವಿಶ್ವದ ನಂ.71ನೇ ಆಟಗಾರ್ತಿ ವಿರುದ್ಧ ಕಳಪೆ ಆರಂಭ ಪಡೆದಿದ್ದ ಹಾಲೆಪ್ ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

►ವೀನಸ್ ವಿನ್: ಇದೇ ವೇಳೆ ಮತ್ತೊಂದು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 25ನೇ ಶ್ರೇಯಾಂಕದ ಮಿಖಾಲೆ ಬುಝಾರ್ನೆಸ್ಕುರನ್ನು 6-7(3), 7-6(3), 6-2 ಸೆಟ್‌ಗಳಿಂದ ಮಣಿಸಿದರು.

2014ರ ಬಳಿಕ ಮೊದಲ ಬಾರಿ ಶ್ರೇಯಾಂಕರಹಿತರಾಗಿ ಕಣಕ್ಕಿಳಿದಿದ್ದ 38ರ ಹರೆಯದ ವೀನಸ್ ಮಹಿಳೆಯರ ಸಿಂಗಲ್ಸ್ ಆಡುತ್ತಿರುವ ಹಿರಿಯ ಆಟಗಾರ್ತಿಯಾಗಿದ್ದಾರೆ. ಅವರು ಎರಡನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿಝ್ ಕಾರ್ನೆಟ್‌ರನ್ನು ಎದುರಿಸಲಿದ್ದಾರೆ.

37ರ ಹರೆಯದ ಹಾಲಿ ಚಾಂಪಿಯನ್ ರೋಜರ್ ಫೆಡರರ್ ಸೋಮವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ದಾಖಲಿಸಿದ್ದರು.

►ಮಾಜಿ ಚಾಂಪಿಯನ್ ಅಝರೆಂಕಾಗೆ ಸೋಲು:ವಿಶ್ವದ ಮಾಜಿ ನಂ.1 ಹಾಗೂ ಎರಡು ಬಾರಿಯ ಚಾಂಪಿಯನ್ ವಿಕ್ಟೋರಿಯ ಅಝರೆಂಕಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಂಗಳವಾರ ಆಡಿದ ತನ್ನ ಮೊದಲ ಸುತ್ತಿನ ಪಂದ್ಯದಲ್ಲೇ ಎಡವಿದ್ದಾರೆ.

ಬೆಲಾರಸ್ ಆಟಗಾರ್ತಿ ಅಝರೆಂಕಾ ಜರ್ಮನಿಯ ಲೌರಾ ಸಿಯಗ್ಮಂಡ್ ವಿರುದ್ಧ 6-7(5/7), 4-6, 2-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಲೌರಾ 2016ರ ಯುಎಸ್ ಓಪನ್ ಬಳಿಕ ಮೊದಲ ಪ್ರಮುಖ ಗೆಲುವು ದಾಖಲಿಸಿದ್ದಾರೆ. 2006ರಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಅಝರೆಂಕಾ ಮೊದಲ ಸುತ್ತಿನಲ್ಲಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News