ಬೂತ್‌ ಮಟ್ಟದಲ್ಲಿ ಏಜೆಂಟ್ ನೇಮಿಸಲು ರಾಜಕೀಯ ಪಕ್ಷಗಳ ನಿರ್ಲಕ್ಷ್ಯ: ಮುಖ್ಯಚುನಾವಣಾಧಿಕಾರಿ ಸಂಜೀವ್‌ ಕುಮಾರ್

Update: 2019-01-16 15:47 GMT

ಬೆಂಗಳೂರು, ಜ.16: ರಾಜಕೀಯ ಪಕ್ಷಗಳು ಬೂತ್ ಮಟ್ಟದಲ್ಲಿ ತಮ್ಮ ಪಕ್ಷದ ಏಜೆಂಟ್‌ಗಳನ್ನು ನೇಮಿಸಲು ನಿರ್ಲಕ್ಷ್ಯ ವಹಿಸಿವೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್‌ ಕುಮಾರ್ ವಿಷಾದಿಸಿದರು.

ಬುಧವಾರ ಚುನಾವಣಾ ಆಯೋಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 26,432 ಬೂತ್‌ ಮಟ್ಟದ ಮತದಾನ ಕೇಂದ್ರಗಳಲ್ಲಿ ಏಜೆಂಟರನ್ನು ನೇಮಿಸಬೇಕೆಂದು ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಕಾಂಗ್ರೆಸ್ 9,497, ಬಿಜೆಪಿ 14,696, ಜೆಡಿಎಸ್ 1,038 ಹಾಗೂ ಬಿಎಸ್ಪಿ 950ಕೇಂದ್ರಗಳಲ್ಲಿ ಮಾತ್ರ ಏಜೆಂಟರನ್ನು ನೇಮಿಸಿವೆ ಎಂದು ತಿಳಿಸಿದರು.

ಪ್ರತಿ ರಾಜಕೀಯ ಪಕ್ಷವು ಬೂತ್‌ಮಟ್ಟದಲ್ಲಿ ಏಜೆಂಟ್‌ಗಳನ್ನು ನೇಮಿಸಿದರೆ, ನಕಲು ಮತದಾರರನ್ನು ತಡೆಗಟ್ಟಬಹುದು. ಹಾಗೂ ಹೊಸ ಮತದಾರರ ಸೇರ್ಪಡೆಗೂ ಅವಕಾಶವಿರುತ್ತದೆ. ಶೀಘ್ರವೆ ತಮ್ಮ ಪಕ್ಷಗಳ ಏಜೆಂಟ್‌ಗಳನ್ನು ಪ್ರತಿಬೂತ್ ಮಟ್ಟದಲ್ಲಿ ನೇಮಿಸುವ ಮೂಲಕ ಪಾರದರ್ಶಕ ಮತದಾನ ಪ್ರಕ್ರಿಯೆಗೆ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.

ಯುವ ಮತದಾರರು ಹೆಚ್ಚಾಗಲಿ: ಮತದಾನದ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಇಲ್ಲಿಯವರೆಗಿನ ಅಂಕಿಅಂಶದ ಪ್ರಕಾರ 7.12ಲಕ್ಷ ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಆದರೆ, ನಮ್ಮ ನಿರೀಕ್ಷೆ ಸುಮಾರು 15ಲಕ್ಷಕ್ಕೂ ಹೆಚ್ಚು ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಜ.1, 2019ಕ್ಕೆ 18ವರ್ಷ ತುಂಬಿದ ಯುವಜನತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ತಮ್ಮ ಹತ್ತಿರದ ತಹಶೀಲ್ದಾರ್ ಕಚೇರಿ ಹಾಗೂ www.voterreg.kar.nic.in ವೆಬ್‌ಸೈಟ್‌ಗೆ ಹೋಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೀಗಾಗಿ ಅರ್ಹತೆ ಇರುವ ಯಾರು ಸಹ ಮತದಾರರ ಪಟ್ಟಿಯಿಂದ ಹೊರಕ್ಕೆ ಉಳಿಯಬಾರದು ಎಂದು ಅವರು ಹೇಳಿದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಖಚಿತಪಡಿಸಿಕೊಳ್ಳಲು www.ceokarnataka.kar.nic.in ವೆಬ್‌ಸೈಟ್‌ನಲ್ಲಿ ಖಚಿತ ಪಡಿಸಿಕೊಳ್ಳಬಹುದು. ಹಾಗೂ ಹೆಸರು, ವಿಳಾಸದಲ್ಲಿ ಬದಲಾವಣೆಯಾಗಬೇಕಿದ್ದರೆ, ಫಾರಂ 8ರಲ್ಲಿ ಬದಲಾಯಿಸಿಕೊಳ್ಳಲು ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.

ಪರಿಷ್ಕೃತ ಮತದಾರರ ಪಟ್ಟಿ

ಪುರುಷ ಮತದಾರರು-2,54,84,972

ಮಹಿಳಾ ಮತದಾರರು-2,48,46,976

ತೃತೀಯ ಲಿಂಗಿಗಳು-4718

ಒಟ್ಟು ಮತದಾರರ ಸಂಖ್ಯೆ-5,03,36,666

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News