ಯುವಜತನೆ ರಾಜಕೀಯ ಕ್ಷೇತ್ರದತ್ತ ಆಸಕ್ತರಾಗಲಿ: ಸಭಾಪತಿ ಪ್ರತಾಪ್‌ ಚಂದ್ರಶೆಟ್ಟಿ

Update: 2019-01-16 15:52 GMT

ಬೆಂಗಳೂರು, ಜ.16: ರಾಜಕೀಯ ಕ್ಷೇತ್ರಕ್ಕೆ ಯುವ ಜನತೆ ಹೆಚ್ಚಾಗಿ ಬರಬೇಕು. ಈ ನಿಟ್ಟಿನಲ್ಲಿ ಯುವ ಸಂಸತ್ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವಿಧಾನಸಭೆ, ಲೋಕಸಭೆ ಕುರಿತು ಹೆಚ್ಚು ಆಸಕ್ತಿ ಮೂಡುವಂತೆ ಮಾಡಲಿ ಎಂದು ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಆಶಿಸಿದರು.

ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಸಚಿವಾಲಯ ಕ್ಲಬ್‌ನಲ್ಲಿ ಆಯೋಜಿಸಿದ್ದ 2018-19ನೆ ಸಾಲಿನ ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಯುವ ಸಂಸತ್ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್, ಸಾಪ್ಟ್‌ವೇರ್ ಕ್ಷೇತ್ರದತ್ತ ಹೆಚ್ಚು ಆಕರ್ಷಿಸುತ್ತಿದ್ದಾರೆ. ಈ ಕ್ಷೇತ್ರದ ಜತೆಗೆ ರಾಜಕೀಯ ಕ್ಷೇತ್ರದತ್ತಲೂ ವಿದ್ಯಾರ್ಥಿಗಳು ಬರಬೇಕು. ಪ್ರಜಾಪ್ರಭುತ್ವದ ಯಶಸ್ವಿಗೆ ಸಂಸತ್ ಆಧಾರಸ್ತಂಭವಾಗಿದೆ. ಇಂತಹ ಸಂಸತ್‌ನಲ್ಲಿ ಭಾಗವಹಿಸುವಂತಹ ಗುರಿಯನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕೆಂದು ಅವರು ಹೇಳಿದರು.

ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಯುವ ಜನತೆ ಹೊಸ ಭರವಸೆ, ಆತ್ಮವಿಶ್ವಾಸದೊಂದಿಗೆ ರಾಜಕೀಯ ಕ್ಷೇತ್ರದತ್ತ ಧಾವಿಸಲಿ ಎಂದು ಅವರು ಹೇಳಿದರು. ಈ ವೇಳೆ ಸರಕಾರದ ಕಾರ್ಯದರ್ಶಿ ದ್ವಾರಕನಾಥ್ ಬಾಬು ಮತ್ತಿತರರಿದ್ದರು.

ಕಾರ್ಯಕ್ರಮದಲ್ಲಿ ಯುವ ಸಂಸತ್ ಸ್ಪರ್ಧೆಯಲ್ಲಿ ಉತ್ತಮವಾಗಿ ಭಾಗವಹಿಸಿದ ಉತ್ತರ ಕನ್ನಡ ಜಿಲ್ಲೆಯ ನಂದಿನಿಗೆ ಪ್ರಥಮ ಬಹುಮಾನ, ಬೀದರ್‌ನ ನಿರಂಜನ ಬಸವರಾಜ್‌ಗೆ ದ್ವಿತೀಯ ಬಹುಮಾನ, ದಕ್ಷಿಣ ಕನ್ನಡ ಜಿಲ್ಲೆಯ ಶ್ರೀರಾಮ ತೃತೀಯ ಬಹುಮಾನ, ಹಾವೇರಿಯ ಪ್ರಗತಿ ನಾಲ್ಕನೆ ಬಹುಮಾನ ಹಾಗೂ ಬೆಳಗಾವಿಯ ರಕ್ಷಿತಾಗೆ ಐದನೆ ಬಹುಮಾನವನ್ನು ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News