ಬೆಂಗಳೂರಿನ ಅಭಿವೃದ್ಧಿ ಕೆಲಸಕ್ಕಾಗಿ 50 ಸಾವಿರ ಕೋಟಿ ರೂ. ವೆಚ್ಚ: ಜಿ. ಪರಮೇಶ್ವರ್

Update: 2019-01-16 16:05 GMT

ಬೆಂಗಳೂರು, ಜ.16: ಮುಂದಿನ ನಾಲ್ಕು ವರ್ಷದಲ್ಲಿ ಬೆಂಗಳೂರಿನ ಅಭಿವೃದ್ಧಿ ಕೆಲಸಕ್ಕಾಗಿ ಸುಮಾರು 50 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ, ಸಮುದಾಯ ಭವನ ಇತರೆ ಕಟ್ಟಡಗಳ ಶಿಲಾನ್ಯಾಸ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿದೆ. ನಗರದ ಅಭಿವೃದ್ಧಿ ಕೂಡ ಜೊತೆ ಜೊತೆಯಾಗಿ ಆಗಬೇಕು. ಈ ನಿಟ್ಟಿನಲ್ಲಿ ಚಾಲುಕ್ಯ ಸರ್ಕಲ್‌ವರೆಗೂ ಎಲಿವೇಟೆಡ್ ಕಾರಿಡಾರ್ ಯೋಜನೆ ತರಲಾಗುತ್ತಿದೆ. ಆದರೆ ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿ, ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದರು.

ಕೆಲವರಿಗೆ ಅಭಿವೃದ್ಧಿಗಿಂತ ಜಾತಿ-ಧರ್ಮಗಳ ನಡುವೆ ಜಗಳ ತಂದಿಟ್ಟು ರಾಜಕೀಯ ಮಾಡುವುದೇ ಮುಖ್ಯವಾಗಿದೆ. ಈ ದೇಶದಲ್ಲಿರುವ ಬಹುಸಂಖ್ಯಾತ ಜನ ಜಾತಿ-ಧರ್ಮಗಳ ರಾಜಕೀಯ ಮಾಡಿದರೆ ಅವರು ಸುಮ್ಮನೆ ಬಿಡುವುದಿಲ್ಲ. ನಮ್ಮದು ಎಲ್ಲ ಧರ್ಮಗಳ ಸಮನ್ವಯ ಸಮಾಜ. ಇಲ್ಲಿ ಎಲ್ಲರೂ ಮನುಷ್ಯರೇ ಇದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಉರುಳಿಸಲು ನಮ್ಮ ಶಾಸಕರನ್ನು ಖರೀದಿ ಮಾಡುವ ಕೀಳು ಮಟ್ಟಕ್ಕೆ ಬಿಜೆಪಿ ಇಳಿದಿದೆ. ನಮ್ಮ ಸರಕಾರವನ್ನು ಬೀಳಿಸಲು ನಿಮ್ಮಿಂದ ಸಾಧ್ಯವಿಲ್ಲ. ಒಳ್ಳೆಯ ಆಡಳಿತ ಕೊಡಲು ಜನರಿಗೆ ಮಾತು ಕೊಟ್ಟಿರುವಂತೆ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದ್ದೇವೆ. ಸುಲಭವಾಗಿ ಸರಕಾರ ಬೀಳಿಸಬಹುದು ಎಂದುಕೊಂಡರೆ, ಅದು ನಿಮ್ಮ ಕನಸು. ಅಷ್ಟು ಸುಲಭವಾಗಿ ಸರಕಾರ ಬೀಳಿಸಲು ನಾವು ಬಿಡುತ್ತೇವಾ? ಈ ರಾಜ್ಯದ ಜನ ನಮ್ಮೊಂದಿಗಿದ್ದಾರೆ. ಅವರು ನಮ್ಮೊಟ್ಟಿಗಿರುವವರೆಗೂ ನೀವು ಸರಕಾರ ರಚಿಸುವುದು ಕನಸು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News