ರಾಜ್ಯದಲ್ಲಿ ನವೋದ್ಯಮಗಳಿಗೆ ಅಗತ್ಯ ಪ್ರೋತ್ಸಾಹ: ಡಾ.ಜಿ.ಪರಮೇಶ್ವರ್

Update: 2019-01-16 16:30 GMT

ಬೆಂಗಳೂರು, ಜ.16: ರಾಜ್ಯ ಸರಕಾರವು ಮೊಟ್ಟ ಮೊದಲ ಬಾರಿಗೆ ಸ್ಟಾರ್ಟ್ ಅಪ್ ಪಾಲಿಸಿ(ನವೋದ್ಯಮ ನೀತಿ) ಜಾರಿಗೆ ತಂದಿದೆ. ಇಡೀ ದೇಶದಲ್ಲಿ 40 ಸಾವಿರ ನವೋದ್ಯಮಗಳು ಆರಂಭವಾಗಿದ್ದು, ಈ ಪೈಕಿ 13 ಸಾವಿರ ನವೋದ್ಯಮಗಳು ನಮ್ಮ ರಾಜ್ಯದಲ್ಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ‘ಬೆಂಗಳೂರು ಟೆಕ್ ಸಮ್ಮಿಟ್’ಗೆ ಪೂರ್ವಭಾವಿಯಾಗಿ ಮಾಹಿತಿ, ಜೈವಿಕ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನವೋದ್ಯಮಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಸಂಶೋಧನೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ನಿರ್ಮಿಸಿಕೊಡಲಾಗಿದೆ. ಹೀಗಾಗಿ ಜಾಗತಿಕಮಟ್ಟದ ಬೃಹತ್ ಕಂಪೆನಿಗಳು, ಉದ್ಯಮಿಗಳು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ಇಂದು ಬೆಂಗಳೂರು ನಗರ ಐಟಿ ಬಿಟಿ ಸಿಟಿಯಾಗಿ ಗುರುತಿಸಿಕೊಳ್ಳುತ್ತಿದೆ. ಇಂದು ಕೈಗಾರಿಕೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ಹಲವು ವಿಚಾರಗಳ ಬಗ್ಗೆ ಅವರು ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು. ಕೈಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಕೇವಲ ಕೈಗಾರಿಕೆ ಅಷ್ಟೆ ಅಲ್ಲದೇ ಮಾರುಕಟ್ಟೆ, ಕೃಷಿ, ಹವಾಮಾನ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಈ ಸಮಸ್ಯೆಗೂ ಕೂಡ ವೈಜ್ಞಾನಿಕವಾಗಿ ಸಂಶೋಧನೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳು ಗಮನ ಹರಿಸಬೇಕಿದೆ ಎಂದು ಪರಮೇಶ್ವರ್ ಹೇಳಿದರು.

ಕೈಗಾರಿಕಾ ಕ್ಷೇತ್ರದಲ್ಲಿನ ಸವಾಲುಗಳ ಬಗ್ಗೆ ಉದ್ಯಮಿಗಳು ಬೆಳಕು ಚೆಲ್ಲಿದ್ದಾರೆ. ಮುಂದಿನ ಪೀಳಿಗೆ ಏನೆಲ್ಲ ಸಮಸ್ಯೆ ಎದುರಿಸಬಹುದು ಅದಕ್ಕೆ ಈಗಿನಿಂದಲೇ ಏನೆಲ್ಲಾ ಪರಿಹಾರ ಕಂಡುಕೊಳ್ಳಬಹುದು, ಯಾವೆಲ್ಲ ಸುಧಾರಣೆ ತರಬಹುದು ಎಂಬುದರ ಬಗ್ಗೆ ಕೂಡ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಕೈಗಾರಿಕೆ ಕ್ಷೇತ್ರ ಇನ್ನಷ್ಟು ಬಲಿಷ್ಠವಾಗಬೇಕಿದ್ದರೆ ಶಿಕ್ಷಣ ಸಂಸ್ಥೆಗಳು ಕೈಗಾರಿಕೆಗಳೊಂದಿಗೆ ನೇರ ಸಂಪರ್ಕ ಹೊಂದುವ ಅನಿವಾರ್ಯತೆ ಇದೆ. ಉದ್ಯಮಕ್ಕೆ ಬೇಕಾದ ರೀತಿಯ ಶಿಕ್ಷಣ, ತರಬೇತಿ ನೀಡಬೇಕೆಂದರೆ ಅಕಾಡೆಮಿ ಹಾಗೂ ಕೈಗಾರಿಕೆ ನಡುವೆ ಸೇತುವೆ ಇರಬೇಕು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪಠ್ಯಪುಸ್ತಕ ಬದಲಿಸುವ ಉದ್ದೇಶ ಹೊಂದಿದ್ದೆ ಎಂದು ಪರಮೇಶ್ವರ್ ತಿಳಿಸಿದರು.

ತುಮಕೂರಿನಲ್ಲಿ ಬೃಹತ್ ಕೈಗಾರಿಕಾ ಹಬ್ ನಿರ್ಮಾಣ ಮಾಡುವ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೇರುತ್ತಿದೆ. ಈ ಹಬ್‌ನಲ್ಲಿ ಜಪಾನಿಸ್ ಹಬ್ ಕೂಡ ತಲೆ ಎತ್ತುತ್ತಿದೆ. ಒಟ್ಟಾರೆ ರಾಜ್ಯ ಸರಕಾರ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುತ್ತಾ ಬಂದಿದೆ ಅವರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News