ರಾಜ್ಯದ ಇಂದಿನ ಪರಿಸ್ಥಿತಿಗೆ ಬಿಜೆಪಿ ಕಾರಣವಲ್ಲ: ಸಿ.ಟಿ.ರವಿ

Update: 2019-01-16 16:33 GMT

ಬೆಂಗಳೂರು, ಜ. 16: ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ನಾಯಕರು ತೊಟ್ಟಿಲನ್ನು ತೂಗುತ್ತಾ, ಮಗು ಚಿವುಟುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ವಿನಾಕಾರಣ ಬಿಜೆಪಿಯನ್ನ ದೂಷಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೂರಿದ್ದಾರೆ.

ಕಾಂಗ್ರೆಸ್‌ನವರಿಗೆ ರಾಜ್ಯದ ಜನರನ್ನು ದಾರಿ ತಪ್ಪಿಸುವ ಉದ್ದೇಶ ಬಿಟ್ಟರೆ ಬೇರೆ ಯಾವ ಉದ್ದೇಶವೂ ಇಲ್ಲ. ಕಾಂಗ್ರೆಸ್ ನಾಯಕರು ತಮ್ಮ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ ಎನ್ನುತ್ತಲೇ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ದೂರುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರ ಹೇಳಿಕೆಯಲ್ಲೇ ವಿರೋಧಾಭಾಸವಿದೆ ಎಂದು ಆಕ್ಷೇಪಿಸಿದ್ದಾರೆ.

ರಾಜ್ಯದ ಇಂದಿನ ಪರಿಸ್ಥಿತಿಗೆ ಬಿಜೆಪಿ ಕಾರಣವಲ್ಲ, ಸರಕಾರದ ಅಸಹಜ ಮೈತ್ರಿಯ ಪರಿಣಾಮವಿದು. ಅತೃಪ್ತ ಶಾಸಕರಿಗೆ ಮೈತ್ರಿ ಸರಕಾರದಲ್ಲಿ ಏನೇನು ಆಮಿಷ ಒಡ್ಡಲಾಗಿತ್ತೋ ಗೊತ್ತಿಲ್ಲ. ಶಾಸಕರಿಗೆ ಆಮಿಷ ತೋರಿಸಿ ಮೋಸ ಮಾಡಿದ್ದರಿಂದಲೇ ಅತೃಪ್ತ ಶಾಸಕರು ಬಂಡಾಯವೆದ್ದಿದ್ದಾರೆ. ಏಳು ತಿಂಗಳಿನಿಂದ ಮೈತ್ರಿ ಸರಕಾರದಲ್ಲಿ ಉಂಟಾದ ಎಲ್ಲ ಸಮಸ್ಯೆಗಳಿಗೆ ಬಿಜೆಪಿಯನ್ನ ಹೊಣೆ ಮಾಡಲಾಗುತ್ತಿದೆ. ಉತ್ತಮ ಆಡಳಿತ ಕೊಡುವ ಭರವಸೆ ನೀಡಿ ಈಗ ವಿಫಲವಾಗಿದೆ. ಇದಕ್ಕೆ ಕಾಂಗ್ರೆಸ್-ಜೆಡಿಎಸ್‌ನ ಅವಕಾಶವಾದಿ ರಾಜಕಾರಣವೆ ಕಾರಣ. ಹಾಗಾಗಿ ಜನರನ್ನ ತಪ್ಪು ದಾರಿಗೆ ಎಳೆಯುತ್ತಿರುವ ಮುಖ್ಯಮಂತ್ರಿ, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಸಿ.ಟಿ.ರವಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News