ಎಲ್ಲ ಏಳು ಶಿಖರ, ಜ್ವಾಲಾಮುಖಿ ಪರ್ವತಗಳನ್ನೇರಿದ ಸಾಹಸಿ ಈ ಭಾರತೀಯ ಟೆಕ್ಕಿ

Update: 2019-01-17 03:56 GMT

ಕೊಲ್ಕತ್ತಾ, ಜ.17: ಪಶ್ಚಿಮ ಬಂಗಾಳ ಮೂಲದ ಟೆಕ್ಕಿ ಸತ್ಯರೂಪ್ ಸಿದ್ಧಾರ್ಥ ಅವರು ಅಂಟಾರ್ಟಿಕದಲ್ಲಿರುವ 4,285 ಮೀಟರ್ ಎತ್ತರದ ಮೌಂಟ್ ಸಿಡ್ಲೆ ಜ್ವಾಲಾಮುಖಿ ಶಿಖರವನ್ನು ಬುಧವಾರ ಏರುವ ಮೂಲಕ ವಿಶ್ವದ ಎಲ್ಲ ಖಂಡಗಳಲ್ಲಿರುವ ಅತಿ ಎತ್ತರದ ಪರ್ವತಗಳನ್ನು ಮತ್ತು ಜ್ವಾಲಾಮುಖಿ ಪರ್ವತಗಳನ್ನು ಏರಿದ ಅತ್ಯಂತ ಎಳೆ ವಯಸ್ಸಿನ ವ್ಯಕ್ತಿ ಎಂಬ ದಾಖಲೆ ಸೃಷ್ಟಿಸಿದರು.

ಸಿದ್ಧಾರ್ಥ್‌ಗೆ ಈಗ 35 ವರ್ಷ 274 ದಿನ. ಗಿನ್ನಿಸ್ ವಿಶ್ವದಾಖಲೆ ಪುಸ್ತಕದ ಪ್ರಕಾರ, ಆಸ್ಟ್ರೇಲಿಯಾದ ಡೇನಿಯಲ್ ಬುಲ್ ಎಂಬುವವರು ಸದ್ಯಕ್ಕೆ ಈ ದಾಖಲೆ ಹೊಂದಿದ್ದಾರೆ. ಈ ವ್ಯಕ್ತಿ 36 ವರ್ಷ 157  ದಿನಗಳಾಗಿದ್ದಾಗ ಈ ಎಲ್ಲ ಏಳು ಅತ್ಯುನ್ನತ ಶಿಖರಗಳನ್ನು ಏರಿದ ಸಾಧನೆ ಮಾಡಿದ್ದರು. 2016 ಮತ್ತು 2017ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು.

ಸಿದ್ಧಾರ್ಥ್ 2018 ಮತ್ತು 19ರ ನಡುವೆ ಈ ಸಾಹಸ ಮಾಡಿದ್ದಾರೆ. ಎಲ್ಲ ಏಳು ಶೃಂಗ ಹಾಗೂ ಏಳು ಜ್ವಾಲಾಮುಖಿ ಶಿಖರಗಳನ್ನು ಏರಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಯೂ ಇವರದ್ದು. "ಅತ್ಯುನ್ನತ ಶಿಖರದಲ್ಲಿ ನಾನು ಭಾರತದ ರಾಷ್ಟ್ರಗೀತೆ ನುಡಿಸಿದೆ" ಎಂದು ಶಿಬಿರಕ್ಕೆ ಮರಳಿದ ಬಳಿಕ ಪತ್ರಕರ್ತರ ಜತೆ ಉಪಗ್ರಹ ದೂರವಾಣಿಯಲ್ಲಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು. "ಇಲ್ಲಿ ವಿಪರೀತ ಚಳಿ ಇದ್ದು, ಮೋಡ ಕವಿದಿದೆ. ನನ್ನ ಬೆರಳುಗಳು ಶೀತದ ಹೊಡೆತದಿಂದ ಘಾಸಿಯಾಗಿರುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

"ಶಿಬಿರದಲ್ಲಿ ರಾತ್ರಿಯನ್ನು ಕಳೆದ ಬಳಿಕ ಸಿದ್ಧಾರ್ಥ 2,100 ಮೀಟರ್ ಎತ್ತರದಲ್ಲಿರುವ ಮೂಲ ಶಿಬಿರಕ್ಕೆ ವಾಪಸ್ಸಾಗಲಿದ್ದಾರೆ. ಅಲ್ಲಿಂದ ವಿಶೇಷ ವಿಮಾನದಲ್ಲಿ ಯೂನಿಯನ್ ಗ್ಲೇಸಿಯರ್‌ನಲ್ಲಿರುವ ಶಿಬಿರಕ್ಕೆ ಬರಲಿದ್ದಾರೆ" ಎಂದು ಅವರ ಪ್ರವಾಸ ನಿರ್ವಹಿಸುತ್ತಿರುವ ಆಪ್ತಸ್ನೇಹಿತ ದೀಪಾಂಜನ್ ದಾಸ್ ಹೇಳಿದ್ದಾರೆ. ಈ ಶಿಖರ ಏರಲು ಮೂಲ ಶಿಬಿರದಿಂದ 10 ಗಂಟೆ ಯಾನ ಕೈಗೊಳ್ಳಬೇಕಾಯಿತು ಎಂದು ದಾಸ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News