ಕ್ಷುಲ್ಲಕ ವಿಚಾರಕ್ಕೆ ನೆರೆಮನೆಯವನಿಂದ ದಾಳಿ: ಮಹಿಳೆ ಸಾವು, ಪತಿ, ಪುತ್ರ ಗಂಭೀರ

Update: 2019-01-17 07:59 GMT

ಹೊಸದಿಲ್ಲಿ, ಜ.17: ಪಶ್ಚಿಮ ದಿಲ್ಲಿಯ ಖ್ಯಾಲ ಪ್ರದೇಶದಲ್ಲಿ ಬುಧವಾರ ಸಂಜೆ ನೆರೆಮನೆಯ ವ್ಯಕ್ತಿಯೊಬ್ಬನ ಮಾರಣಾಂತಿಕ ದಾಳಿಗೆ 35 ವರ್ಷದ ಮಹಿಳೆ ಬಲಿಯಾದರೆ ಆಕೆಯ ಪತಿ ಮತ್ತು ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಘಟನೆ ನಡೆದಾಗ ಹಾಜರಿದ್ದ ನೆರೆಹೊರೆಯವರು ದಾಳಿ ತಡೆಯುವ ಬದಲು ಘಟನೆಯನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. 

ಘಟನೆ ನಡೆದ ನಂತರ ಆರೋಪಿ ಮುಹಮ್ಮದ್ ಆಝಾದ್ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಮೃತ ಮಹಿಳೆಯನ್ನು ಸುನೀತಾ (35) ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಆಕೆಯ ಪತಿ ವೀರು (41) ಹಾಗೂ 18 ವರ್ಷದ ಪುತ್ರ ಆಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಲ್ಕು ದಿನಗಳ ಹಿಂದೆ ಸುನೀತಾ ಮತ್ತು ಆಝಾದ್ ನಡುವೆ ನಡೆದ ಒಂದು ಸಣ್ಣ ಜಗಳವೇ ಈ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ ಎಂದು ಹೇಳಲಾಗಿದೆ. ಆ ದಿನ ಸುನೀತಾಳ ಮನೆಯ ಬಾಲ್ಕನಿಯಲ್ಲಿದ್ದ ಬಾಟಲಿಯೊಂದು ಕೆಳಗೆ ರಸ್ತೆಯಲ್ಲಿ ನಿಂತಿದ್ದ ಮಹಮ್ಮದ್ ಆಝಾದ್ ಮೇಲೆ ಬಿದ್ದ ನಂತರ ಇಬ್ಬರೂ ಜಗಳವಾಡಿಕೊಂಡಿದ್ದರು.

ಬುಧವಾರ ಸಂಜೆ 7:30ರ ಹೊತ್ತಿಗೆ ಮತ್ತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ತನ್ನ ಪತಿ ಮತ್ತು ಪುತ್ರ ಮನೆಗೆ ಬಂದ ನಂತರ ಈ ಬಗ್ಗೆ ಸುನೀತಾ ದೂರಿಕೊಂಡಿದ್ದರು. ನಂತರ ಮೂವರೂ ಮನೆಯ ಹೊರಗೆ ಬಂದಾಗ ಅಲ್ಲಿ ಕೈಯಲ್ಲಿ ಚೂರಿ ಹಿಡಿದು ಆಝಾದ್ ದಾಳಿಗೆ ಸನ್ನದ್ಧನಾಗಿದ್ದನೆನ್ನಲಾಗಿದೆ. ಆಝಾದ್ ಮೊದಲು ಆಕಾಶ್ ಗೆ ಇರಿದಿದ್ದು, ಆತನನ್ನು ರಕ್ಷಿಸಲು ಹೆತ್ತವರಿಬ್ಬರೂ ಧಾವಿಸಿದಾಗ ಅವರ ಮೇಲೆ ದಾಳಿ ನಡೆಸಿ ರಸ್ತೆಯಲ್ಲಿ ಎಲ್ಲರೆದುರು ರಕ್ತದ ಓಕುಳಿಯನ್ನೇ ಹರಿಸಿದ್ದ.

ಈ ಘಟನೆಯ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ನೆರೆಹೊರೆಯವರು ಬೊಬ್ಬಿಡುತ್ತಿದ್ದರೇ ವಿನಹ ಯಾರೂ ಸಹಾಯಕ್ಕೆ ಧಾವಿಸಿರಲಿಲ್ಲವೆಂಬುದು ಸ್ಪಷ್ಟವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News