ದೇವೇಗೌಡರಂತಹ ಸಮಯಸಾಧಕ ರಾಜಕಾರಣಿ ಬೇರೆ ಯಾರೂ ಇಲ್ಲ: ಯಡಿಯೂರಪ್ಪ

Update: 2019-01-17 14:02 GMT

ಬೆಂಗಳೂರು, ಜ.17: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಂತಹ ಸಮಯಸಾಧಕ ರಾಜಕಾರಣಿ, ನಮ್ಮ ರಾಜ್ಯದಲ್ಲಿ ಬೇರೆ ಯಾರೂ ಇಲ್ಲ. ಇವರು ಪ್ರತಿಪಾದಿಸುವ ತತ್ವ, ಸಿದ್ಧಾಂತಗಳು ಕೇವಲ ಅವರ ಕುಟುಂಬದ ಸದಸ್ಯರನ್ನು ಕಾಪಾಡಿಕೊಳ್ಳಲಿಕ್ಕೆ ಮಾತ್ರ ಸೀಮಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದ ಯಾವ ಶಾಸಕರನ್ನೂ ಸೆಳೆಯುವ ಕೆಲಸ ಮಾಡುತ್ತಿಲ್ಲ. ವಿನಾಕಾರಣ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದರು.

ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸುವ ಮೂಲಕ ಇದೇ ದೇವೇಗೌಡ, ದಲಿತರನ್ನು ತುಳಿದರು. ಈಗ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಇವರಂತಹ ಸಮಯಸಾಧಕ ರಾಜಕಾರಣಿಯನ್ನು ನಾನು ಕಂಡಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು.

ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ಈವರೆಗೆ ಏನೇನು ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮಹಾರಾಷ್ಟ್ರದ ಶಾಸಕರನ್ನು ಮೈಸೂರಿನಲ್ಲಿ ಇರಿಸಲಾಗಿತ್ತು. ಇತ್ತೀಚೆಗೆ ಗುಜರಾತ್ ಶಾಸಕರನ್ನು ಬಿಡದಿಯ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. ಆಗ ಎಲ್ಲಿ ಹೋಗಿತ್ತು ಮಲ್ಲಿಕಾರ್ಜುನ ಖರ್ಗೆಯವರ ಪ್ರಜಾಪ್ರಭುತ್ವ ಎಂದು ಅವರು ಟೀಕಿಸಿದರು.

ಯಡಿಯೂರಪ್ಪಗೆ ಬುದ್ಧಿ ಬೆಳೆದಿಲ್ಲ ಎಂದು ನಿನ್ನೆ ಟೀಕಿಸಿದ್ದ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಆದರೂ, ಅವರಿಗೆ ಬುದ್ಧಿ ಬಂದಿಲ್ಲ. ಇವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ನಾಳೆ ಸಿದ್ದರಾಮಯ್ಯ ಕರೆದಿರುವ ಶಾಸಕಾಂಗ ಪಕ್ಷದ ಸಭೆಗೆ ಎಷ್ಟು ಜನ ಶಾಸಕರು ಬರುತ್ತಾರೋ ನೋಡೋಣ. ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ. ನಮ್ಮ ಶಾಸಕ ಡಾ.ಅಶ್ವಥ್‌ ನಾರಾಯಣ್ ಮುಂಬೈಗೆ ಹೋದರೆ, ಕಾಂಗ್ರೆಸ್‌ನವರಿಗೆ ಏನು ಕಷ್ಟ ಎಂದು ಪ್ರಶ್ನಿಸಿದ ಯಡಿಯೂರಪ್ಪ, ಅವರ ಶಾಸಕರನ್ನು ಹಿಡಿತದಲ್ಲಿಟ್ಟು ಕೊಳ್ಳುವುದನ್ನು ಬಿಟ್ಟು, ನಮ್ಮ ವಿರುದ್ಧ ಯಾಕೆ ಆರೋಪಗಳನ್ನು ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News