ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಹೋರಾಡಿದವರೇ ಫಲಿತಾಂಶದ ಬಳಿಕ ನಮ್ಮ ಬಳಿ ಬಂದರು: ದೇವೇಗೌಡ

Update: 2019-01-17 15:26 GMT

ಬೆಂಗಳೂರು, ಜ.17: ನಾನು ಹತ್ತು ತಿಂಗಳು ಆಕಸ್ಮಿಕವಾಗಿ ಪ್ರಧಾನಮಂತ್ರಿಯಾದೆ. ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳುವ ಸಂದರ್ಭ ಬಂದಾಗ ಅಟಲ್ ಬಿಹಾರಿ ವಾಜಪೇಯಿ ನನ್ನ ಸರಕಾರ ಉಳಿಸಲು ನೆರವು ನೀಡುವುದಾಗಿ ಹೇಳಿದ್ದರು. ಆದರೆ, ನಾನು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟ ರಾಜಕಾರಣಿಯಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ಗುರುವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಈಗ 86 ವರ್ಷ ವಯಸ್ಸಾಗಿದೆ. ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಆದರೆ, ಯಾವುದೋ ಒಂದು ಶಕ್ತಿ ನನ್ನನ್ನು ಕೆಲಸ ಮಾಡಲು ಪ್ರೇರೇಪಿಸುತ್ತಿದೆ. ಆದುದರಿಂದಲೇ, ಪಕ್ಷ ಸಂಘಟನೆ ಮಾಡಲು ಬಂದಿದ್ದೇನೆ ಎಂದರು.

ಜೆಡಿಎಸ್ ಪಕ್ಷವು ಅಲ್ಪಸಂಖ್ಯಾತರ ವಿರೋಧಿಯಲ್ಲ. ನಾವು ಬಿಜೆಪಿ ಜೊತೆ ಹೋದ ಭಾವನೆ ಇನ್ನೂ ನಿಮ್ಮ ಮನಸ್ಸಿನಲ್ಲಿದೆಯೇ? ನಾವು ಯಾವುದೇ ‘ಎ’ ಟಿಂ, ‘ಬಿ’ ಟೀಂ ಅಲ್ಲ. ನಾನು ನಿಮ್ಮ ಟೀಂ ಅನ್ನೋದನ್ನು ತಿಳಿದುಕೊಳ್ಳಿ ಎಂದು ದೇವೇಗೌಡ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಹೋರಾಡಿದವರೇ ಫಲಿತಾಂಶದ ಬಳಿಕ ನಮ್ಮ ಬಳಿ ಬಂದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮ ಶಾಸಕರು, ಸಚಿವರು ಸಮ್ಮಿಶ್ರ ಸರಕಾರಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುತ್ತಿದ್ದಾರೆ. ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ ಎಂದರು.

ಕನಕಪುರದಲ್ಲಿ ನಡೆದ ಒಂದು ಘಟನೆಯಿಂದಾಗಿ ಅಲ್ಪಸಂಖ್ಯಾತರಿಗೆ ಏನಾದರೂ ಮಾಡಬೇಕೆಂದು ಅನಿಸಿತು. ಮುಸ್ಲಿಮರಿಗೆ ಸೇನೆಯಲ್ಲಿ ಕೆಲಸ ಕೊಡಬಾರದು ಅಂತಿದ್ದರು. ಆದರೆ, ನಾನು ಪ್ರಧಾನಿಯಾದ ಬಳಿಕ ಮುಸ್ಲಿಮರಿಗೆ ಸೇನೆಯಲ್ಲಿ ಕೆಲಸ ಸಿಗುವಂತೆ ಮಾಡಿದೆ ಎಂದು ದೇವೇಗೌಡ ತಿಳಿಸಿದರು. ನಮ್ಮ ದೇಶದ ಮುಸ್ಲಿಮರು ತಾಜ್ ಹೊಟೇಲ್ ಮೇಲೆ ಬಾಂಬ್ ದಾಳಿ ನಡೆಸಿಲ್ಲ. ಆದರೆ, ಇನ್ನೂ ನಮ್ಮ ದೇಶದ ಮುಸ್ಲಿಮರನ್ನು ದೂಷಣೆ ಮಾಡಲಾಗುತ್ತಿದೆ. ನಾನು ಹಿಂದೂ ಧರ್ಮದವನಾದರೂ, ದರ್ಗಾ, ಚರ್ಚ್ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಈ ಬಾರಿ ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ರಚನೆ ಮಾಡುತ್ತೇವೆ. ಆ ಮೂಲಕ ದೇವೇಗೌಡರಿಗೆ ಮತ್ತಷ್ಟು ಶಕ್ತಿಯನ್ನು ತುಂಬುತ್ತೇವೆ. ದೇವೇಗೌಡರ ಮುಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದರು.

ಪ್ರಧಾನಿ ನರೇಂದ್ರಮೋದಿಯ ಕುದುರೆಯನ್ನು ಕಟ್ಟಿ ಹಾಕುವ ಸಾಮರ್ಥ್ಯ ದೇವೇಗೌಡರಿಗಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ನಮ್ಮ ರಾಜ್ಯದ ಉಪ ಚುನಾವಣೆಯ ಫಲಿತಾಂಶವು ಇದಕ್ಕೆ ಸಾಕ್ಷಿಯಾಗಿದೆ ಕುಮಾರಸ್ವಾಮಿ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳುತ್ತೇವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ಕಳೆದ ಒಂದು ವಾರದಿಂದ ಸರಕಾರಕ್ಕೆ ಡೆಡ್‌ಲೈನ್ ಕೊಡಲಾಗುತ್ತಿದೆ. ಸಂಕ್ರಾಂತಿ ವೇಳೆಗೆ ರಾಜ್ಯ ಸರಕಾರ ಪತನವಾಗುತ್ತದೆ ಎಂದು ಅಪಪ್ರಚಾರ ಮಾಡಿದ್ದರು. ಹೀಗಾಗಿ, ಅಲ್ಪಸಂಖ್ಯಾತರ ಈ ಬೃಹತ್ ಸಮಾವೇಶ ನಡೆಯುತ್ತದೋ, ಇಲ್ಲವೋ ಎಂಬ ಆತಂಕ ನನ್ನಲ್ಲಿತ್ತು ಎಂದು ಅವರು ಹೇಳಿದರು.

ಈ ಸಮಾವೇಶದಲ್ಲಿ ಸೇರಿರುವ ನಿಮ್ಮನ್ನು ನೋಡಿ ನನಗೆ ಸಮಾಧಾನವಾಗಿದೆ. ಇದೇ ನನಗೆ ಸ್ಪೂರ್ತಿ. ನಾನು ಕೇವಲ ರೈತರ ಸಾಲಮನ್ನಾ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ ಎಂದು ಭಾವಿಸಬೇಡಿ. ಯುವಕರಿಗೆ ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡಲಾಗಿದೆ. ನನಗೆ ಯಾವುದೇ ಜಾತಿಯಿಲ್ಲ ಎಂದು ಅವರು ತಿಳಿಸಿದರು.

ಸಮ್ಮಿಶ್ರ ಸರಕಾರವನ್ನು ನಡೆಸಲು ಯಾವ ರೀತಿಯಲ್ಲಿ ಸರ್ಕಸ್ ಮಾಡುತ್ತಿದ್ದೇನೆ ಅನ್ನೋದು ನನಗೆ ಮಾತ್ರ ಗೊತ್ತು. ಪ್ರತಿದಿನ ಸರಕಾರ ಭವಿಷ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರೆ, ಅಧಿಕಾರಿಗಳನ್ನು ಇಟ್ಟುಕೊಂಡು ನಾನು ಯಾವ ರೀತಿ ಕೆಲಸ ಮಾಡಲು ಸಾಧ್ಯ ಹೇಳಿ ಎಂದು ಕುಮಾರಸ್ವಾಮಿ ಹೇಳಿದರು.

ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅಲ್ಪಸಂಖ್ಯಾತರ ಪರವಾಗಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸ್ಥಾಪನೆ, ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ದೇವೇಗೌಡರು. ರಾಜ್ಯದಲ್ಲಿ ಅತೀ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಚಿಕ್ಕಮಗಳೂರಿನ ದತ್ತ ಪೀಠ ವಿವಾದ ಬಗೆಹರಿಸಲು ಸಾಧ್ಯವಾಗಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News