'ಆಪರೇಷನ್ ಕಮಲ' ಜನತೆಗೆ ಮಾಡುತ್ತಿರುವ ಅಪಮಾನ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

Update: 2019-01-17 16:23 GMT

ಬೆಂಗಳೂರು, ಜ.17: ಬಿಜೆಪಿ ಅನೈತಿಕವಾಗಿ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಆಪರೇಷನ್ ಕಮಲಕ್ಕೆ ಮುಂದಾಗಿರುವುದು ಜನತೆಗೆ ಮಾಡುವ ಅಪಮಾನವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಬೆಂಗಳೂರು ಕಾಂಗ್ರೆಸ್ ಸಮಿತಿ ನಗರದ ಆನಂದರಾವ್ ವೃತ್ತದಲ್ಲಿ ಬಿಜೆಪಿ ವಿರುದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರವನ್ನು ಕಂಡಿರುವ ರಾಜ್ಯದ ಜನತೆ, ಬಿಜೆಪಿಗೆ ವಿರುದ್ಧವಾದ ತೀರ್ಪನ್ನು ನೀಡುತ್ತಾ ಬಂದಿದ್ದಾರೆ. ಆದರೂ ಬಿಜೆಪಿ ನಾಯಕರು ಜನತೆಗೆ ವಿರುದ್ಧವಾಗಿ ಷಡ್ಯಂತ್ರಗಳ ಮೂಲಕ ಅಧಿಕಾರಕ್ಕೆ ಬರಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ತನ್ನ ಆಡಳಿತಾವಧಿಯಲ್ಲಿ ಕೇವಲ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ತಂದುಕೊಡುವಂತಹ ಯೋಜನೆಗಳನ್ನು ರೂಪಿಸುವ ಮೂಲಕ, ಈ ದೇಶದ ಕಾರ್ಮಿಕ, ರೈತ, ಮಹಿಳೆಯರ ಪರವಾಗಿ ಒಂದು ಕಾರ್ಯಕ್ರಮವನ್ನು ರೂಪಿಸಿಲ್ಲ. ಬಿಜೆಪಿ ನಾಯಕರು ಜನರ ಮನೆ ಬಾಗಿಲಿಗೆ ಹೋಗಿ ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವ ಮೂಲಕ ಅಧಿಕಾರಕ್ಕೆ ಬರುವ ಹುನ್ನಾರ ನಡೆಸಿದ್ದಾರೆ ಎಂದು ಅವರು ಕಿಡಿಕಾರಿದರು.

ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ಈ ವರ್ಷದ ಬಜೆಟ್ ಮುಂದಿನ ತಿಂಗಳು ಮಂಡನೆ ಆಗಲಿದೆ. ಈ ಸಂಬಂಧ ವಿರೋಧ ಪಕ್ಷದ ನಾಯಕರು ಆಯವ್ಯಯದ ಕುರಿತು ಸಲಹೆ ಸೂಚನೆಗಳನ್ನು ಕೊಡುವುದನ್ನು ಬಿಟ್ಟು, ಉತ್ತರ ಭಾರತದ ಯಾವುದೊ ಹೊಟೇಲ್‌ನಲ್ಲಿ ಮೋಜು-ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿಜೆಪಿಯ ಜನವಿರೋಧಿ ನಡೆಗಳನ್ನು ರಾಜ್ಯದ ಜನತೆ ಗಂಭೀರವಾಗಿ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ರ್ಯಾಲಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ, ಕಾಂಗ್ರೆಸ್‌ನ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್, ಹರಿಪ್ರಸಾದ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಅಹ್ಮದ್, ಬಿ.ಕೆ.ಚಂದ್ರಶೇಖರ್ ಮತ್ತಿತರರಿದ್ದರು..

ಕಾಂಗ್ರೆಸ್‌ನ ಕೆಲವು ಶಾಸಕರಲ್ಲಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಪಕ್ಷದ ಹಿರಿಯ ನಾಯಕರು ಬಗೆಹರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವೊಬ್ಬ ಶಾಸಕನೂ ಬಿಜೆಪಿಗೆ ಹೋಗುವ ಮಾತೆ ಇಲ್ಲ.

-ಈಶ್ವರ್ ಖಂಡ್ರೆ ಕಾರ್ಯಾಧ್ಯಕ್ಷ, ಕೆಪಿಸಿಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News