ರಾಜಕೀಯ ಧಾರಾವಾಹಿಗಳು ಜನರಲ್ಲಿ ಗಾಬರಿ ಮೂಡಿಸಿವೆ: ಸಿಎಂ ಕುಮಾರಸ್ವಾಮಿ

Update: 2019-01-17 16:39 GMT

ಬೆಂಗಳೂರು, ಜ.17: ಕಳೆದ ಒಂದು ವಾರದಿಂದ ರಾಜ್ಯದ ಟಿವಿ ಚಾನೆಲ್‌ಗಳಲ್ಲಿನ ರಾಜಕೀಯ ಧಾರಾವಾಹಿಗಳು ಜನರಲ್ಲಿ ಗಾಬರಿಯನ್ನುಂಟು ಮಾಡಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂಜಿನಿಯರುಗಳ ಸಂಘದ ವತಿಯಿಂದ ನಗರದ ಎಂಜಿನಿಯರ್‌ಗಳ ಸಂಘದ ಸಿಲ್ವರ್ ಜ್ಯುಬಿಲಿ ಕಟ್ಟಡದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಂಸ್ಮರಣಾ ಉಪನ್ಯಾಸ ಹಾಗೂ 2019ರ ವರ್ಷದ ತಾಂತ್ರಿಕ ದಿನಚರಿ ಬಿಡುಗಡೆಗೊಳಿಸಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಹಿಂದೆ ಬಿಜೆಪಿ ಜತೆಗಿನ ಸಮ್ಮಿಶ್ರ ಸರಕಾರದಲ್ಲಿಯೂ 20 ತಿಂಗಳ ಆಡಳಿತದ ಅವಧಿಯಲ್ಲಿ ಕುಮಾರಸ್ವಾಮಿ ಅಧಿಕಾರ ಮಾಡುವುದು 17, 18 ತಿಂಗಳು ಎಂದು ದಿನಾಂಕ ನಿಗದಿ ಮಾಡಿಬಿಟ್ಟಿದ್ದರು. ಪ್ರಸ್ತುತ ಸಮ್ಮಿಶ್ರ ಸರಕಾರ ರಚನೆಯಾದ ದಿನದಿಂದಲೂ ಈಗ ಹೋಯ್ತು, ಆಗ ಹೋಯ್ತು ಎಂದು ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಜನರಲ್ಲಿ ಗಾಬರಿಯ ವಾತಾವರಣ ನಿರ್ಮಾಣವಾಗಿದೆ ಎಂದರು.

ಕಳೆದ ಒಂದು ವಾರದಿಂದ ಪ್ರಶ್ನಾರ್ಥಕ ಚಿಹ್ನೆಯನ್ನೂ ಬಳಸದೇ ಸರಕಾರ ಇನ್ನೇನು ಬಿದ್ದೇ ಹೋಯ್ತು. ಇನ್ನೇನಿದ್ದರೂ ರಾಜ್ಯಪಾಲರ ಆಡಳಿತ ಎಂದು ಸುದ್ದಿ ವಾಹಿನಿಗಳು ಬಿತ್ತರಿಸುತ್ತಿವೆ. ಶಾಸಕರು ಅಲ್ಲಿದ್ದಾರೆ, ಇಲ್ಲಿದ್ದಾರೆ, ಅದು ಮಾಡ್ತಿದಾರೆ, ಅವರು ಮಾತಾಡಿದಾರೆ ಎಂದೆಲ್ಲಾ ಟಿವಿ ನಿರೂಪಕರು ಚೆನ್ನಾಗಿ ನಿರೂಪಣೆ ಮಾಡುತ್ತಾ ರಾಜ್ಯದ ಜನರಿಗೆ ಉಚಿತ ಮನರಂಜನೆಯನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಟಿವಿಗಳು ಪ್ರಸಾರ ಮಾಡುವುದಕ್ಕೆ ನಾನೇನಾದ್ರೂ ಪ್ರತಿಕ್ರಿಯಿಸಿದರೆ ಮುಖ್ಯಮಂತ್ರಿಗಳು ಮಾಧ್ಯಮಗಳನ್ನು ಬೈತಾರೆ ಎನ್ನುತ್ತಾರೆ. ಆದರೆ, ನನ್ನಷ್ಟು ತಾಳ್ಮೆಯಿಂದಿರುವ ವ್ಯಕ್ತಿ ಮತ್ತೊಬ್ಬರು ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಸರಕಾರ ಯಾವಾಗ ಬೇಕಾದರೂ ಬೀಳಬಹುದು ಎಂಬ ವಾತಾವರಣವಿದ್ದರೂ ಶೇ.85ರಷ್ಟು ಅಧಿಕಾರಿಗಳು ನನ್ನ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ. ರಾಜ್ಯದ ಹಿರಿಯ ಅಧಿಕಾರಿಗಳ ಕಾರ್ಯವೈಖರಿ ನೋಡಿದಾಗ ನಾನೇ ಭಾಗ್ಯವಂತ ಎಂದು ಹೇಳಿದರು.

ನಾನೆಂದೂ ಉದ್ಧಟತನದ ಮಾತುಗಳನ್ನು ಆಡುವುದಿಲ್ಲ. ಯಾರೊಬ್ಬರನ್ನೂ ಜಾತಿಯ ವ್ಯಾಮೋಹದಲ್ಲಿ ರಕ್ಷಣೆ ನೀಡಬೇಕು, ಅಗೌರವಿಸಬೇಕು ಎಂದು ನಡೆದುಕೊಂಡಿಲ್ಲ. ದುಡಿಮೆ ಮಾಡುವವರಿಗೆ, ಪ್ರಾಮಾಣಿಕರಿಗೆ ರಕ್ಷಣೆ ನೀಡುವುದನ್ನು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದೇನೆ ಎಂದು ನುಡಿದರು.

ಕೆಪಿಟಿಸಿಎಲ್‌ನಲ್ಲಿ ಹಲವು ವರ್ಷಗಳಿಂದ ಸಹಾಯಕ ಎಂಜಿನಿಯರ್‌ಗಳಾಗಿ ದುಡಿಯುತ್ತಿರುವವರಿಗೆ ಪದೋನ್ನತಿ ನೀಡುವ ಸಂಬಂಧ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News