ಕಬ್ಬಿನ ಬಾಕಿ ಕೊಡಿಸದಿದ್ದರೆ ಜ.30 ರಂದು ರಾಜ್ಯಾದ್ಯಂತ ಕರ ನಿರಾಕರಣೆ ಚಳವಳಿ: ಕುರುಬೂರು ಶಾಂತಕುಮಾರ್

Update: 2019-01-17 16:43 GMT

ಬೆಂಗಳೂರು, ಜ.17: ರಾಜ್ಯದ ರೈತರ ಕಬ್ಬಿನ ಹಣ ಹಿಂದಿನ ಸರಕಾರದ ಬಾಕಿ ಹಾಗೂ ಪ್ರಸಕ್ತ ಸಾಲಿನ ಕಬ್ಬಿನ ಹಣ ಕೊಡಿಸಲು ಸರಕಾರ ಗಂಭೀರ ಕ್ರಮ ಕೈಗೊಳ್ಳದಿದ್ದರೆ ಇದೇ ತಿಂಗಳ 30ರ ನಂತರ ರಾಜ್ಯಾದ್ಯಂತ ಕರ ನಿರಾಕರಣೆ ಚಳವಳಿ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಕಬ್ಬು ಬೆಳೆಗಾರರ ರಾಜ್ಯ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಹಲವಾರು ಬಾರಿ ಕಬ್ಬಿನ ಹಣಕ್ಕಾಗಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ತಿಂಗಳಿಗೊಮ್ಮೆ ಸಕ್ಕರೆ ಸಚಿವರು, ಸಕ್ಕರೆ ಆಯುಕ್ತರು ಬದಲಾಗುತ್ತಿರುವುದರಿಂದ, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಈ ತಿಂಗಳ 30ರ ವರೆಗೆ ಸರಕಾರಕ್ಕೆ ಕಾಲಾವಕಾಶ ಕೊಡುತ್ತಿದ್ದೇವೆ. ಕಬ್ಬಿನ ಹಣ ಕೊಡಿಸಬೇಕು, ಇಲ್ಲದಿದ್ದರೆ ವಿದ್ಯುತ್, ಬಸ್, ಕಂದಾಯ, ನೀರು, ರೈಲು ಕರಗಳನ್ನು ನಿರಾಕರಿಸಿ ಚಳವಳಿ ನಡೆಸಲಾಗುವುದು ಎಂದು ಶಾಂತಕುಮಾರ್ ಹೇಳಿದರು.

ಸರಕಾರ ನಮ್ಮ ಚಳವಳಿಗೆ ತಡೆಗಟ್ಟಲು ಯತ್ನಿಸಿದರೆ, ಜೈಲ್ ಭರೋ ನಡೆಸಲಾಗುವುದು. ರಾಜ್ಯದ 156 ತಾಲೂಕುಗಳಲ್ಲಿ ಬರಗಾಲ ಕಾಡುತ್ತಿದೆ. ಭತ್ತ, ರಾಗಿ, ಮೆಕ್ಕೆಜೋಳ ಬೆಳೆದ ರೈತರು, ಸರಕಾರದ ಖರೀದಿ ಕೇಂದ್ರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಆದರೆ, ಸರಕಾರ ಮಾತ್ರ ತನ್ನ ಕುರ್ಚಿ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದೆ. ಕುರ್ಚಿ ಕಿತ್ತುಕೊಳ್ಳಲು ವಿರೋಧ ಪಕ್ಷ ದೊಂಬರಾಟ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ, ರೈತರಿಗೆ ಕನಿಷ್ಠ ಆದಾಯ ಭದ್ರತೆ ಖಾತರಿ, ಹಾಲು, ಹಣ್ಣು, ತರಕಾರಿ, ರೇಷ್ಮೆ, ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ, ಫಸಲ್ ಬಿಮಾ ಯೋಜನೆಯನ್ನು ರೈತರ ಪ್ರತಿ ಹೊಲದ ವಿಮೆ, ಎಲ್ಲ ಪ್ರದೇಶ, ಎಲ್ಲ ಬೆಳೆಗಳಿಗೂ ಅನ್ವಯವಾಗುವಂತೆ ಜಾರಿಯಾಗಬೇಕು ಎಂಬ ವಿಷಯಗಳ ಆಧಾರದಲ್ಲಿ ಮಾ.12ರಂದು ಬೆಂಗಳೂರಿನಲ್ಲಿ ಬೃಹತ್ ರೈತರ ಸಮಾವೇಶ ನಡೆಸಲಾಗುವುದು. ಅದರಲ್ಲಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರೈತರ ಪಾತ್ರದ ಕುರಿತು ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

ಅಲ್ಲದೆ, ರಾಜ್ಯ ಸರಕಾರ ರೈತರ ಹೋರಾಟದ ಮೇಲಿನ ಎಲ್ಲ ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News