ರಸ್ತೆ ಬದಿಯಲ್ಲಿ ಎಸೆದಿದ್ದ ಅನಾಥ ಶಿಶುವಿಗೆ ಹಾಲುಣಿಸಿದ ಪೋಲಿಸ್ ಪೇದೆ: ಎಲ್ಲೆಡೆ ಪ್ರಶಂಸೆ

Update: 2019-01-17 16:44 GMT

ಬೆಂಗಳೂರು, ಜ.17: ರಸ್ತೆ ಬದಿಯಲ್ಲಿ ಎಸೆದಿದ್ದ ನವಜಾತ ಶಿಶುವಿಗೆ ಹಾಲುಣಿಸುವ ಮೂಲಕ ಮಹಿಳಾ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದು, ಎಲ್ಲೆಡೆ ಪ್ರಸಂಶೆ ವ್ಯಕ್ತವಾಗಿದೆ.

ನಗರ ಪೋಲಿಸರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಮಾನವೀಯತೆ ಮೆರೆದಿರುವುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಅದಕ್ಕೆ ನಿದರ್ಶನವೆಂಬಂತೆ ರಸ್ತೆಬದಿ ಎಸೆದಿದ್ದ ನವಜಾತ ಶಿಶುವಿಗೆ ಮಹಿಳಾ ಪೇದೆ ಹಾಲುಣಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಒಂದು ದಿನದ ಹಿಂದಷ್ಟೇ ಜನಿಸಿದ್ದ ಹೆಣ್ಣು ಮಗುವನ್ನು ಬುಧವಾರ ಬೆಳಗ್ಗೆ ಕೊರೆಯುವ ಚಳಿಯಲ್ಲಿಯೇ ಕರುಣೆಯಿಲ್ಲದೇ ಅಪರಿಚಿತರು ಯಲಹಂಕದ ಜಿಕೆವಿಕೆ ಕ್ಯಾಂಪಸ್‌ನ ರಸ್ತೆ ಬದಿ ಎಸೆದು ಹೋಗಿದ್ದರು. ಇರುವೆಗಳಿಂದ ಮುತ್ತಿದ್ದ ಶಿಶುವನ್ನು ಕಂಡ ರಕ್ಷಣಾ ಕಾರ್ಯಕರ್ತರು ವಿದ್ಯಾರಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಗು ದೊರೆತ ಸ್ಥಳವು ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಗೆ ಬಾರದಿದ್ದರಿಂದ ಯಲಹಂಕ ಪೊಲೀಸರು ಧಾವಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಜೊತೆಗಿದ್ದ ಮಹಿಳಾ ಪೊಲೀಸ್ ಪೇದೆ ಸಂಗೀತಾ ಎಸ್ ಹಲಿಮನಿ ಆ ಮಗುವನ್ನು ನೋಡಿದ ಕೂಡಲೇ ಎದೆ ಹಾಲುಣಿಸಿ, ಆರೈಕೆ ಮಾಡಿದ್ದಾರೆ. ಆ ಬಳಿಕ ಅಲ್ಲಿನ ಯಲಹಂಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿಂದ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆರೋಗ್ಯವಾಗಿರುವ ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ವೈದ್ಯರು ನಿರ್ಧಾರ ಮಾಡಿದ್ದಾರೆ.

ಸಂಗೀತಾ ಅವರ ಕಾರ್ಯಕ್ಕೆ ಸಹೋದ್ಯೋಗಿಗಳು ಡಿಸಿಪಿ ಕಲಾ ಕೃಷ್ಣಸ್ವಾಮಿ ಸೇರಿ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಕಾಲಕ್ಕೆ ಹಾಲುಣಿಸಿ ಮಗು ಕಾಪಾಡಿದ ಸಂಗೀತಾ ಅವರನ್ನು ಆಸ್ಪತ್ರೆ ಸಿಬ್ಬಂದಿ ಪ್ರಶಂಸಿಸಿದ್ದಾರೆ. ಇನ್ನು, ಹಾಲುಣಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News