ಮುಂಬೈನ ಯುವ ಕ್ರಿಕೆಟಿಗ ಮುಶೀರ್ ಖಾನ್‌ಗೆ ಮೂರು ವರ್ಷ ನಿಷೇಧ

Update: 2019-01-18 05:42 GMT

ಮುಂಬೈ, ಜ.18: ಈ ಋತುವಿನಲ್ಲಿ ಮುಂಬೈನ 16 ವರ್ಷದೊಳಗಿನ ಕ್ರಿಕೆಟ್ ತಂಡದ ನಾಯಕತ್ವವಹಿಸಿಕೊಂಡಿದ್ದ ಮುಶೀರ್ ಖಾನ್ ವಿರುದ್ಧ ಸಹ ಆಟಗಾರರು ಅಶಿಸ್ತಿನ ವರ್ತನೆ ಕುರಿತು ದೂರು ನೀಡಿದ್ದಾರೆಂಬ ಕಾರಣವನ್ನು ಮುಂದಿಟ್ಟುಕೊಂಡು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಅಶಿಸ್ತಿನ ಅಸ್ತ್ರ ಬಳಸಿ ಮೂರು ವರ್ಷಗಳ ಕಾಲ ನಿಷೇಧ ಹೇರಿದೆ.

14ರಹರೆಯದ ಆಲ್‌ರೌಂಡರ್ ಖಾನ್ ಎಡಗೈ ಸ್ಪಿನ್ ಬೌಲರ್ ಆಗಿದ್ದು ನಿಷೇಧದ ಹಿನ್ನೆಲೆಯಲ್ಲಿ ಎಂಸಿಎ ಆಯೋಜಿಸುವ ಯಾವುದೆ ಟೂರ್ನಿಗಳಲ್ಲಿ ಆಡುವಂತಿಲ್ಲ. ಪ್ರತಿಭಾವಂತ ಯುವ ಕ್ರಿಕೆಟಿಗ ಖಾನ್‌ಗೆ ಈ ನಿಷೇಧ ಶಿಕ್ಷೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ಖಾನ್ ಮುಂಬೈನ ಇನ್ನೋರ್ವ ಪ್ರತಿಭಾವಂತ ಆಟಗಾರ ಪೃಥ್ವಿ ಶಾ ಜೊತೆಗೂಡಿ 2013ರಲ್ಲಿ ಎಂಸಿಎ ಕಾರ್ಯಕ್ರಮದಲ್ಲಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್‌ರಿಂದ ವಿಶೇಷ ಪ್ರಶಸ್ತಿ ಸ್ವೀಕರಿಸಿದ್ದರು.

ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಈ ಕ್ರಮ ಕೈಗೊಂಡಿದ್ದೇವೆ. ನಮಗೆ ಹುಡುಗನ ಬಗ್ಗೆ ಕನಿಕರವಿದೆ. ಆದರೆ, ಶಿಸ್ತು ವಿಚಾರದಲ್ಲಿ ನಾವು ರೇಖೆಯನ್ನು ಮೀರುವಂತಿಲ್ಲ. ನಾಯಕನಾಗಿ ಅವರು ಎಲ್ಲರಿಗೂ ಮಾದರಿಯಾಗಬೇಕಾಗುತ್ತದೆ ಎಂದು ಎಂಸಿಜಿ ಜಂಟಿ ಕಾರ್ಯದರ್ಶಿ ಉನ್ಮೇಶ್ ಖಾನ್ವಿಲ್ಕರ್ ಹೇಳಿದ್ದಾರೆ.

ಈ ನಿರ್ಧಾರದ ಪ್ರಶ್ನಿಸಿ ನಾವು ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಮುಶೀರ್ ತಂದೆ ಹಾಗೂ ಕೋಚ್ ನೌಶಾದ್ ಖಾನ್ ಹೇಳಿದ್ದಾರೆ.

ಎಂಸಿಎ ನಿರ್ಧಾರವನ್ನು ಖಂಡಿಸಿದ ಮುಂಬೈ ಶಾಲಾ ಕ್ರೀಡಾ ಸಂಸ್ಥೆಗಳ ಕಾರ್ಯದರ್ಶಿ ನದೀಂ ಮೆಮೊನ್, ಈ ಬಾಲಕನಲ್ಲಿ ಅದ್ಭುತ ಪ್ರತಿಭೆಯಿದೆ. ಇದು ವೈಯಕ್ತಿಕ ದ್ವೇಷದ ಕ್ರಮವಾಗಿದೆ. ಶೋಕಾಸ್ ನೋಟಿಸ್ ನೀಡದೇ ನಿಷೇಧ ವಿಧಿಸಿದ್ದು ಹೇಗೆ? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News