ಬಾಲಕಿಯ ಭ್ರೂಣ ತೆಗೆದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು: ನಾಗಲಕ್ಷ್ಮಿ ಭಾಯಿ ಆರೋಪ

Update: 2019-01-18 16:29 GMT

ಬೆಂಗಳೂರು, ಜ.18: ಅಪ್ರಾಪ್ತ ಬಾಲಕಿಯ ಭ್ರೂಣವನ್ನು ತೆಗೆದ ವೈದ್ಯರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭಾಯಿ ಆರೋಪಿಸಿದ್ದಾರೆ.

ಯಲಹಂಕ ಸಾರ್ವಜನಿಕ ಆಸ್ಪತ್ರೆ ವೈದ್ಯರೊಬ್ಬರು 15 ವರ್ಷದ ಬಾಲಕಿಯ ಭ್ರೂಣವನ್ನು ತೆಗೆದಿದ್ದರು. ಇದನ್ನು ತಿಳಿದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷೀ ಭಾಯಿ ಇತ್ತೀಚಿಗೆ ದಾಳಿ ನಡೆಸಿ, ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ದೂರು ನೀಡಿದ ಬಳಿಕವೂ ಪೊಲೀಸರು ಯಾವುದೇ ರೀತಿ ಕ್ರಮ ಕೈಗೊಳ್ಳದ ಹಿನ್ನೆಲೆ ನಾಗಲಕ್ಷ್ಮೀ ಭಾಯಿ, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಕಾನೂನು ಅನ್ವಯ ಸ್ಥಳೀಯ ಪೊಲೀಸರ ಉಪಸ್ಥಿತಿ ಮೇರೆಗೆ ಭ್ರೂಣವನ್ನು ತೆಗೆಯಬೇಕು. ಆದರೆ, ಯಲಹಂಕ ವ್ಯಾಪ್ತಿಯ ಕೆಲ ವೈದ್ಯರು ಯಾವುದೇ ನಿಯಮಗಳನ್ನು ಅನುಸರಿಸದೇ ಅವ್ಯವಹಾರ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆ ಮಹಿಳಾ ಆಯೋಗ ದಾಳಿ ನಡೆಸಿದಾಗ, ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಶಿಶುಗಳಿಗೆ ಸೂಕ್ತ ಸೌಲಭ್ಯ, ವ್ಯವಸ್ಥೆ ಇಲ್ಲದ ವಿಚಾರ ಬೆಳಕಿಗೆ ಬಂದಿತ್ತು.

ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News