ಮಹಾಮೈತ್ರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು ಗೊತ್ತೇ ?

Update: 2019-01-20 03:46 GMT

ಸಿಲ್ವಸ್ಸಾ, ಜ. 20: ಕೊಲ್ಕತ್ತಾದಲ್ಲಿ ನಡೆದ ಮಹಾಮೈತ್ರಿ ರ್ಯಾಲಿಯನ್ನು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. "ಇದು ಸ್ವಾರ್ಥಿಗಳ ಕೂಟ; ಇದರಲ್ಲಿ ಪಾಲ್ಗೊಂಡ ಪಕ್ಷಗಳ ಮುಖ್ಯ ಉದ್ದೇಶವೆಂದರೆ ನಾಶವಾಗುತ್ತಿರುವ ತಮ್ಮ ರಾಜಕೀಯ ವೃತ್ತಿಗಳನ್ನು ಉಳಿಸಿಕೊಳ್ಳುವುದು" ಎಂದು ಟೀಕಿಸಿದ್ದಾರೆ.

"ಬಿಜೆಪಿಯಿಂದ ತಮ್ಮನ್ನು ಸಂರಕ್ಷಿಸಿಕೊಳ್ಳುವ ಸಲುವಾಗಿ ಅವರೆಲ್ಲ ಸೇರಿದ್ದಾರೆ. ಸಾರ್ವಜನಿಕ ಬೆಂಬಲ ಗಣನೀಯವಾಗಿ ಕುಸಿಯುತ್ತಿರುವುದು ಅವರ ಗಮನಕ್ಕೆ ಬಂದಿದೆ. ಆದ್ದರಿಂದ ರಕ್ಷಿಸಿ, ರಕ್ಷಿಸಿ ಎಂದು ಚೀರುತ್ತಿದ್ದಾರೆ" ಎಂದು ದಾದ್ರ ಮತ್ತು ನಗರ್ ಹವೇಲಿಯ ರಾಜಧಾನಿ ಸಿಲ್ವಸ್ಸಾದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮೋದಿ ಹೇಳಿದರು.

"ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಕೇವಲ ಏಕೈಕ ಶಾಸಕರನ್ನು ಹೊಂದಿದ್ದರೂ, ವಿರೋಧ ಪಕ್ಷಗಳ ನಿದ್ದೆಗೆಡಿಸಲು ಅವರೊಬ್ಬರೇ ಸಾಕು" ಎಂದರು.

"ವಿರೋಧ ಪಕ್ಷಗಳು ಇನ್ನೂ ಸಂಘಟಿತರಾಗಲು ಹೋರಾಡುತ್ತಿದ್ದಾರೆ. ಗರಿಷ್ಠ ಪ್ರಯೋಜನ ಪಡೆಯಲು ಪಾಲುದಾರ ಪಕ್ಷಗಳು ಈಗಾಗಲೇ ಚೌಕಾಶಿ ಆರಂಭಿಸಿವೆ. ರೈತರು, ಮಹಿಳೆಯರು, ಯುವ ಮತದಾರರು ಈ ತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಸ್ವಾರ್ಥದ ರಾಜಕಾರಣಿಗಳು ಜನರ ಹೃದಯದಲ್ಲಿ ಎಂದಿಗೂ ಸ್ಥಾನ ಪಡೆಯಲಾರರು" ಎಂದು ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ವೇಳೆ ನಡೆದ ಹಿಂಸಾಚಾರವನ್ನು ಪ್ರಸ್ತಾಪಿಸಿದ ಮೋದಿ, ಅಸಂವಿಧಾನಿಕ ವಿಧಾನದ ಮೂಲಕ ಪ್ರಜಾಪ್ರಭುತ್ವವನ್ನು ದಮನಿಸುವ ಮತ್ತು ಪಂಚಾಯತ್ ಚುನಾವಣೆ ವೇಳೆ ಜನರನ್ನು ಕೊಂದ ಇವರು ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆ ಕೂಗುತ್ತಿದ್ದಾರೆ. "ವಹ್ ಕ್ಯಾ ಸೀನ್ ಹೇ" ಎಂದಷ್ಟೇ ನಾನು ಹೇಳಬಹುದಾಗಿದೆ ಎಂದು 90ರ ದಶಕದ ಜನಪ್ರಿಯ ಹಾಸ್ಯ ಧಾರಾವಾಹಿಯ ಹೆಸರನ್ನು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News