ಪ್ರಣಾಳಿಕೆಯಲ್ಲಿ ರಾಮಮಂದಿರ ಸೇರಿಸಿದರೆ ಕಾಂಗ್ರೆಸ್‌ಗೆ ಬೆಂಬಲ : ವಿಎಚ್‌ಪಿ

Update: 2019-01-20 14:28 GMT

ಲಕ್ನೊ, ಜ.20: ರಾಮಮಂದಿರ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಬಿಜೆಪಿಗೆ ಎಚ್ಚರಿಕೆ ನೀಡಿರುವ ವಿಶ್ವಹಿಂದೂ ಪರಿಷದ್(ವಿಹಿಂಪ), ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡರೆ ಆ ಪಕ್ಷವನ್ನು ಬೆಂಬಲಿಸುವ ಆಯ್ಕೆಯೂ ಮುಕ್ತವಾಗಿದೆ ಎಂದು ತಿಳಿಸಿದೆ.

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಶನಿವಾರ ಪಾಲ್ಗೊಂಡಿದ್ದ ವಿಹಿಂಪ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಲೋಕ್ ಕುಮಾರ್, “ನಮಗೆ ಕಾಂಗ್ರೆಸ್‌ನ ಬಾಗಿಲು ಮುಚ್ಚಲಾಗಿದೆ. ಆದರೆ ಅವರು ಬಾಗಿಲು ತೆರೆದು, ರಾಮಮಂದಿರ ವಿಷಯವನ್ನು ಪ್ರಣಾಳಿಕೆಯಲ್ಲಿ ಸೇರಿಸಿದರೆ ಅವರನ್ನು ಬೆಂಬಲಿಸುವ ಕುರಿತು ಚಿಂತಿಸಬಹುದು” ಎಂದು ಹೇಳಿಕೆ ನೀಡಿದ್ದರು ಎಂದು ವರದಿ ತಿಳಿಸಿತ್ತು. ಜನವರಿ 31ರಂದು ವಿಎಚ್‌ಪಿ ವತಿಯಿಂದ ನಡೆಯಲಿರುವ ಧರ್ಮ ಸಂಸದ್‌ನ ಕುರಿತು ಮಾತನಾಡಿದ ಅವರು, ಧರ್ಮಸಂಸದ್‌ನಲ್ಲಿ ರಾಮಮಂದಿರ ವಿಷಯವನ್ನು ಚರ್ಚಿಸಿ ಸಾಧು ಸಂತರ ಆಶೀರ್ವಾದ ಪಡೆಯುತ್ತೇವೆ. ನಂತರ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದೇವೆ ಎಂದಿದ್ದರು. ಆದರೆ, ರವಿವಾರ ಸುದ್ದಿವಾಹಿನಿಗಳ ಜೊತೆ ಮಾತನಾಡಿದ ಅಲೋಕ್ ಕುಮಾರ್, ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ಇತ್ತೀಚೆಗೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿಯಾಗಿ ಸಂಸತ್ತಿನಲ್ಲಿ ರಾಮಮಂದಿರ ಕುರಿತ ಆಧ್ಯಾದೇಶ ಮಂಡನೆಯಾದರೆ ಅದನ್ನು ಬೆಂಬಲಿಸುವಂತೆ ವಿಎಚ್‌ಪಿ ಕೋರಿತ್ತು. ತಮ್ಮನ್ನು ಬೆಂಬಲಿಸುವ ಪಕ್ಷವನ್ನು ಅಭಿನಂದಿಸುತ್ತೇನೆ ಎಂದು ತಾನು ಹೇಳಿದ್ದೇನೆ.

ಯಾವುದೇ ಪಕ್ಷವನ್ನು ಬೆಂಬಲಿಸುವುದು ತಮ್ಮ ಕೆಲಸವಲ್ಲ ಮತ್ತು ಇದನ್ನು ಮಾಡುವುದೂ ಇಲ್ಲ ಎಂದಿದ್ದಾರೆ. ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಮೊದಲು ಕಾಂಗ್ರೆಸ್ ಪಕ್ಷ ರಾಮದೇವರನ್ನು ತನ್ನ ಹೃದಯದಲ್ಲಿ ಪ್ರತಿಷ್ಠಾಪಿಸಲಿ. ಚುನಾವಣೆಯ ಬಳಿಕ ರಾಮಮಂದಿರ ವಿಷಯದ ವಿಚಾರಣೆ ನಡೆಯಬೇಕೆಂದು ಹೇಳಿರುವ ಕಪಿಲ್ ಸಿಬಲ್ ಅವರಂತಹ ನಾಯಕರನ್ನು ಹೊಂದಿರುವ ಪಕ್ಷವಾಗಿದೆ ಕಾಂಗ್ರೆಸ್ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News