ಈ ವಯಸ್ಸಿನವರಿಗೆ ಈ 2 ದೇಶಗಳಿಗೆ ಪ್ರಯಾಣಿಸಲು ಆಧಾರ್ ಕಾರ್ಡ್ ಸಾಕು!

Update: 2019-01-20 15:44 GMT

ಹೊಸದಿಲ್ಲಿ, ಜ. 20: ನೇಪಾಳ ಹಾಗೂ ಭೂತಾನ್‌ ಗೆ ಪ್ರಯಾಣಿಸಲು ಬಯಸುವ 15 ವರ್ಷಕ್ಕಿಂತ ಕೆಳಗಿನ ಹಾಗೂ 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರು ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಸಲ್ಲಿಸಬಹುದು ಎಂದು ಗೃಹ ಸಚಿವಾಲಯ ಹೇಳಿದೆ.

ಈ ಪ್ರಾಯ ಗುಂಪಿನಲ್ಲಿ ಒಳಗೊಳ್ಳದೇ ಇರುವ ಇತರ ಭಾರತೀಯರು ವೀಸಾ ಅಗತ್ಯವಿಲ್ಲದ ಈ ಎರಡು ದೇಶಗಳಿಗೆ ಪ್ರಯಾಣಿಸಲು ಆಧಾರ್ ಅನ್ನು ಪ್ರಯಾಣ ದಾಖಲೆಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ನೇಪಾಳ ಹಾಗೂ ಭೂತಾನ್‌ ಗೆ  ಪ್ರಯಾಣಿಸುವ ಭಾರತೀಯ ಪ್ರಜೆಗಳಿಗೆ ಮೌಲ್ಯಯುತ ಪಾಸ್‌ಪೋರ್ಟ್, ಭಾರತ ಸರಕಾರ ನೀಡಿದ ಫೋಟೊ ಗುರುತು ಪತ್ರ, ಚುನಾವಣಾ ಆಯೋಗ ನೀಡಿದ ಮತದಾನದ ಗುರತು ಪತ್ರ ಹೊಂದಿದ್ದರೆ, ವಿಸಾ ಬೇಕಾಗಿಲ್ಲ. ಈ ಹಿಂದೆ 65 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 15 ವರ್ಷಕ್ಕಿಂತ ಒಳಗಿನವರು ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಕೇಂದ್ರ ಸರಕಾರದ ಆರೋಗ್ಯ ಯೋಜನೆಯ ಕಾರ್ಡ್ ಅಥವಾ ರೇಷನ್ ಕಾರ್ಡ್ ಅನ್ನು ಎರಡು ದೇಶಗಳಿಗೆ ಭೇಟಿ ನೀಡುವ ಸಂದರ್ಭ ಗುರುತು ಸಾಬೀತುಪಡಿಸಲು ಸಲ್ಲಿಸಬಹುದಾಗಿತ್ತು. ಆದರೆ, ಆಧಾರ್ ಕಾರ್ಡ್ ಅನ್ನು ಸಲ್ಲಿಸಲು ಅವಕಾಶ ಇರಲಿಲ್ಲ.

ಆದರೆ, ಈಗ ಈ ಪಟ್ಟಿಗೆ ಆಧಾರ್ ಕಾರ್ಡ್ ಅನ್ನು ಸೇರಿಸಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ‘‘ಈಗ 65ಕ್ಕಿಂತ ಮೇಲಿನ ಹಾಗೂ 15 ವರ್ಷಕ್ಕಿಂತ ಕೆಳಗಿನ ಪ್ರಾಯ ಗುಂಪಿನ ವ್ಯಕ್ತಿಗಳು ಆಧಾರ್ ಅನ್ನು ಪ್ರಯಾಣ ದಾಖಲೆಯಾಗಿ ಸಲ್ಲಿಸಲು ಅವಕಾಶವಿದೆ’’ ಎಂದು ಅವರು ತಿಳಿಸಿದ್ದಾರೆ. ಭಾರತ, ಕಠ್ಮಂಡು ದೂತವಾಸ ಭಾರತೀಯ ಪ್ರಜೆಗಳಿಗೆ ನೀಡುವ ನೋಂದಣಿ ಪ್ರಮಾಣ ಪತ್ರ ಭಾರತ ಹಾಗೂ ನೇಪಾಳದ ನಡುವೆ ಪ್ರಯಾಣಿಸಲು ಪ್ರಯಾಣ ದಾಖಲೆಯಾಗಿ ಸ್ವೀಕಾರಾರ್ಹವಲ್ಲ ಎಂದು ಅವರು ತಿಳಿಸಿದ್ದಾರೆ. ಆದಾಗ್ಯೂ, ನೇಪಾಳದಲ್ಲಿರುವ ಭಾರತೀಯ ದೂತವಾಸ ಕಚೇರಿ ನೀಡುವ ತುರ್ತು ಪ್ರಮಾಣ ಪತ್ರ ಹಾಗೂ ಗುರುತು ಪ್ರಮಾಣ ಪತ್ರ ಭಾರತಕ್ಕೆ ಹಿಂದಿರುಗಲು ಮಾತ್ರ ಪರಿಗಣನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

15ರಿಂದ 16 ವರ್ಷದ ಒಳಗಿನ ಯುವಜನತೆ ಭಾರತ ಹಾಗೂ ನೇಪಾಳದ ನಡುವೆ ಶಾಲೆಯ ಪ್ರಾಂಶುಪಾಲರು ಪರಿಷ್ಕೃತ ಮಾದರಿಯಲ್ಲಿ ನೀಡಿದ ಗುರುತು ಪ್ರಮಾಣ ಪತ್ರದ ಆಧಾರದಲ್ಲಿ ಪ್ರಯಾಣಿಸಲು ಅವಕಾಶ ಇದೆ ಎಂದು ಅವರು ಹೇಳಿದ್ದಾರೆ ಕುಟುಂಬ ಒಟ್ಟಾಗಿ ಪ್ರಯಾಣಿಸುವ ಸಂದರ್ಭ ಎಲ್ಲರೂ ದಾಖಲೆಗಳನ್ನು ಕೊಂಡೊಯ್ಯುವ ಅಗತ್ಯ ಇರಲಾರದು. ಓರ್ವ ಪ್ರೌಢ ಸದಸ್ಯ ಮಾತ್ರ ಪ್ರಯಾಣ ದಾಖಲೆಗಳನ್ನು ಹೊಂದಿದ್ದರೆ ಸಾಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News