ಆಧ್ಯಾತ್ಮಿಕ ಗುರು ಭಯ್ಯು ಮಹಾರಾಜ್ ಆತ್ಮಹತ್ಯೆ ಹಿಂದಿನ ರಹಸ್ಯ ಬಯಲು

Update: 2019-01-20 16:21 GMT

ಇಂದೋರ್, ಜ. 20: ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಮಹಿಳಾ ಅನುಯಾಯಿಯೊಬ್ಬರು ಬ್ಲ್ಯಾಕ್‌ಮೇಲ್ ಮಾಡಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಆಧ್ಯಾತ್ಮಿಕ ಗುರು ಭಯ್ಯು ಮಹಾರಾಜ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಇಂದೋರ್ ಪೊಲೀಸರು ತಿಳಿಸಿದ್ದಾರೆ.

ಮಹಾರಾಜರ ಆಪ್ತ ಕಾರ್ಯದರ್ಶಿ ಪಾಲಕ್ ಪುರಾಣಿಕ್ (25), ವಿನಾಯಕ ಧುಲೇ (42) ಹಾಗೂ ಶರದ್ ದೇಶ್‌ಮುಖ್ (34) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿಯ ಸ್ಥಳೀಯ ನ್ಯಾಯಾಲಯ ಅವರಿಗೆ 15 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.

ಆಧ್ಯಾತ್ಮಿಕ ಗುರು ಭಯ್ಯು ಮಹಾರಾಜ್ ಇಂದೋರ್‌ನಲ್ಲಿರುವ ತನ್ನ ನಿವಾಸದಲ್ಲಿ ಕಳೆದ ವರ್ಷ ಜೂನ್ 12ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪಾಲಕ್ ಪುರಾಣಿಕ್ ಅವರು ಮಹಾರಾಜರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದರು ಹಾಗೂ ಮಹಿಳಾ ಅನುಯಾಯಿಯನ್ನು ವಿವಾಹವಾಗುವಂತೆ ಒತ್ತಡ ಹೇರಿದ್ದರು ಎಂದು ಪೊಲೀಸ್ ಡಿಐಜಿ ಎಚ್.ಸಿ. ಮಿಶ್ರಾ ಶನಿವಾರ ತಿಳಿಸಿದ್ದಾರೆ. ಮಹಿಳಾ ಅನುಯಾಯಿ ಹಾಗೂ ಆಕೆಯ ಸಹವರ್ತಿ ಭಯ್ಯು ಮಹಾರಾಜ್ ಅವರ ಮಾನಸಿಕ ಆರೋಗ್ಯ ಹದಗೆಡಲು ಅತ್ಯಧಿಕ ಡೋಸ್ ಔಷಧ ನೀಡಿದ್ದರು ಎಂದು ಮಿಶ್ರಾ ತಿಳಿಸಿದ್ದಾರೆ. 

ಮಹಿಳಾ ಅನುಯಾಯಿಯಿಂದ ಅತ್ಯಾಚಾರ ಪ್ರಕರಣ ದಾಖಲಿಸಲಾಗುವುದು ಎಂದು ಪಾಲಕ್ ಪುರಾಣಿಕ್ ಅವರು ವಿನಾಯಕ್ ಹಾಗೂ ಶರದ್‌ರೊಂದಿಗೆ ಸೇರಿ ಆಧ್ಯಾತ್ಮಿಕ ಗುರು ಭಯ್ಯು ಮಹಾರಾಜ್ ಅವರಿಗೆ ಬೆದರಿಕೆ ಒಡ್ಡಿರುವ ಆಡಿಯೊ ಹಾಗೂ ವೀಡಿಯೊ ತುಣುಕುಗಳು ನಮ್ಮಲ್ಲಿ ಇವೆ ಎಂದು ಇಂದೋರ್ ಡಿಐಜಿ ಹರಿ ನಾರಾಯಣಾಚಾರಿ ಮಿಶ್ರಾ ತಿಳಿಸಿದ್ದಾರೆ. ಮಹಿಳೆಗೆ ಹಲವು ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ ಮಹಾರಾಜ ಅವರ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆಶ್ರಮಕ್ಕೆ ಸೇರಿದ ಬಳಿಕ ಪಾಲಕ್‌ಗೆ ಭಯ್ಯು ಮಹಾರಾಜ್ ಅವರು ತೀರಾ ಆತ್ಮೀಯರಾಗಿದ್ದರು. ಮಹಾರಾಜ ಹಾಗೂ ಮಹಿಳೆಯ ನಡುವೆ ನಡೆದ ಸಂಭಾಷಣೆ ವಿವಾಹವಾಗುವ ಯೋಜನೆ ಅಥವಾ ವಿವಾಹ ಆಗಿರುವ ಸಂಭಾವ್ಯತೆಯನ್ನು ಬಹಿರಂಗಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News