2019ರ ಮೊದಲ ಪ್ರಶಸ್ತಿಗೆ ಅಂಕಿತಾ ಮುದ್ರೆ

Update: 2019-01-20 18:33 GMT

ಸಿಂಗಾಪುರ, ಜ.20: ಭಾರತದ ಭರವಸೆಯ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ, ರವಿವಾರ ಸಿಂಗಾಪುರ ಟೆನಿಸ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 2019ರಲ್ಲಿ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿದರು. ಫೈನಲ್ ಪಂದ್ಯದಲ್ಲಿ ಅವರು ಅರಂಟಕ್ಸಾ ರಸ್ ಅವರನ್ನು 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಪ್ರಶಸ್ತಿ 25,000 ಅಮೆರಿಕನ್ ಡಾಲರ್ ಮೊತ್ತದ್ದಾಗಿದೆ.

ಆಸ್ಟ್ರೇಲಿಯನ್ ಓಪನ್ ಕ್ವಾಲಿಫೈಯರ್ಸ್ ಪಂದ್ಯಗಳಲ್ಲಿ ಸ್ಪರ್ಧಿಸಿ ಟೂರ್ನಿಗೆ ಆಗಮಿಸಿದ್ದ ಅಂಕಿತಾ, ವಿಶ್ವ ನಂ.122 ಹಾಗೂ ಹಾಲೆಂಡ್‌ನ ಅಗ್ರ ಶ್ರೇಯಾಂಕದ ಆಟಗಾರ್ತಿಯನ್ನು ಬಗ್ಗುಬಡಿದರು.

 ಟೂರ್ನಿಯುದ್ದಕ್ಕೂ ನಾಲ್ಕು ಶ್ರೇಯಾಂಕಸಹಿತ ಆಟಗಾರ್ತಿಯರನ್ನು ಮಣಿಸಿದ್ದ ಅಂಕಿತಾ, ಎರಡನೇ ಸುತ್ತಿನ ಪಂದ್ಯದಲ್ಲಿ ಡಚ್‌ನ 8ನೇ ಶ್ರೇಯಾಂಕದ ಲೆಸ್ಲಿ ಕೆರ್ಕೊವ್ ಅವರಿಗೆ ಸೋಲಿನ ರುಚಿ ಉಣಿಸಿದ್ದರು. ನಂತರ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಉಜ್ಬೇಕಿಸ್ತಾನದ ಸಬಿನಾ ಶರೀಫೊವಾ ಅವರನ್ನು ಮಣಿಸಿದ್ದರು. ಸಿಂಗಾಪುರ ಪ್ರಶಸ್ತಿ ಜಯಿಸುವುದರೊಂದಿಗೆ 50 ಅಂಕಗಳನ್ನು ಗಳಿಸಿರುವ ಅಂಕಿತಾ ಸೋಮವಾರ ಪ್ರಕಟವಾಗಲಿರುವ ಡಬ್ಲುಟಿಎ ನೂತನ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 168ನೇ ಸ್ಥಾನಕ್ಕೇರುವ ನಿರೀಕ್ಷೆಯಿದೆ. ಇದು ಅಂಕಿತಾ ಅವರಿಗೆ 25,000 ಡಾಲರ್ ಮೊತ್ತದ ಒಟ್ಟು ನಾಲ್ಕನೇ ಪ್ರಶಸ್ತಿಯಾಗಿದೆ. ಕಳೆದ ವರ್ಷವೇ ಅವರು ಈ ಮೊತ್ತಕ್ಕೆ ಸಮನಾದ ಗ್ವಾಲಿಯರ್ ಹಾಗೂ ನಾನ್ಥಾಬುರಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News