ಉದ್ಘಾಟನೆಗೆ ಮುನ್ನವೇ ಜಮ್ಮು ರೋಪ್‌ವೇಯಲ್ಲಿ ದುರಂತ: ಇಬ್ಬರು ಬಲಿ

Update: 2019-01-21 03:32 GMT
ಸಾಂದರ್ಭಿಕ ಚಿತ್ರ

ಜಮ್ಮು, ಜ.21: ಕಾಮಗಾರಿ ಪ್ರಗತಿಯಲ್ಲಿರುವ ಜಮ್ಮು ರೋವ್‌ವೇ ಯೋಜನೆಯಲ್ಲಿ ರವಿವಾರ ಅಣಕು ಪರಿಹಾರ ಕಾರ್ಯಾಚರಣೆ ವೇಳೆ ಕೇಬಲ್ ಕಾರೊಂದು ರೋಪ್‌ವೇನಿಂದ ಕಳಚಿಕೊಂಡ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟು ಇತರ ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆ ಉದ್ಘಾಟಿಸುವ ಎರಡು ವಾರ ಮುನ್ನ ಈ ದುರಂತ ಸಂಭವಿಸಿದೆ.

ಮಹಾಮಾಯ ದೇವಾಲಯ ಬಳಿ ಕೆಲ ತಾಂತ್ರಿಕ ತೊಂದರೆಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಯೋಜನೆಯನ್ನು ಜಾರಿಗೊಳಿಸುತ್ತಿರುವ ಕಂಪೆನಿ, ಅಣಕು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆರು ಕಾರ್ಮಿಕರನ್ನು ಹೊಂದಿದ್ದ ಕೇಬಲ್‌ಕಾರು ಸಮತೋಲನ ಕಳೆದುಕೊಂಡು, ಕಳಚಿಬಿದ್ದಿತು ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರದ ರಾಕೇಶ್ ಕುಮಾರ್ (45) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಶ್ಚಿಮ ಬಂಗಾಳದ ಹರಿಕೃಷ್ಣ ಮಂಜೀತ್ ಸಿಂಗ್, ಮತ್ತು ಲವ್ಲಿ, ಉತ್ತರ ಪ್ರದೇಶದ ರವೀಂದ್ರ (30) ಹಾಗೂ ಜಮ್ಮು ಕಾಶ್ಮೀರದ ಎಂಜಿನಿಯರ್ ಬಲಕೀರ್ತ್ ಸಿಂಗ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಹರಿಕೃಷ್ಣ ಆಸ್ಪತ್ರೆಯಲ್ಲಿ ಮೃತಪಟ್ಟರು.

ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ರೂಪಿಸಲಾದ ಜಮ್ಮು ರೋಪ್‌ವೇ ಯೋಜನೆಯನ್ನು ಪ್ರಧಾನಿ ಮೋದಿ ಫೆಬ್ರವರಿ 3ರಂದು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. 1.66 ಕಿಲೋಮೀಟರ್ ಉದ್ದದ ಎರಡು ಹಂತದ ಈ ಯೋಜನೆಯಡಿ, ಮೊದಲ ಹಂತದಲ್ಲಿ ಬಹು ಕೋಟೆಯಿಂದ ಮಹಾಮಾಯ ಪಾರ್ಕ್ ವರೆಗೆ ಹಾಗೂ ಎರಡನೇ ಹಂತದಲ್ಲಿ ಮಹಾಮಾಯ ದೇವಾಲಯದಿಂದ ತಾವಿ ನದಿಗೆ ಅಡ್ಡಲಾಗಿ ಪೀರ್ ಖೋ ವರೆಗೆ ರೋಪ್‌ವೇ ನಿರ್ಮಿಸಲು ಉದ್ದೇಶಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News