ಇಂಡೊನೇಶ್ಯ ಮಾಸ್ಟರ್ಸ್‌ನಲ್ಲಿ ಸ್ಪರ್ಧಿಸಲಿರುವ ಸೈನಾ, ಶ್ರೀಕಾಂತ್, ಸಿಂಧು

Update: 2019-01-21 18:43 GMT

ಜಕಾರ್ತ, ಜ.21: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು, ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಮುಂಬರುವ ಇಂಡೊನೇಶ್ಯ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಸ್ಪರ್ಧಿಸಲಿದ್ದು. ಮಂಗಳವಾರದಿಂದ ಆರಂಭವಾಗಲಿರುವ ಅರ್ಹತಾ ಪಂದ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ದ್ವಿತೀಯ ಶ್ರೇಯಾಂಕದ ಸಿಂಧು ಕಾಮನ್‌ವೆಲ್ತ್ ಗೇಮ್ಸ್, ಏಶ್ಯನ್ ಗೇಮ್ಸ್ ಹಾಗೂ ವಿಶ್ವಚಾಂಪಿಯನ್‌ಶಿಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಅಲ್ಲದೆ 2018ರ ವರ್ಷವನ್ನು ವಿಶ್ವ ಟೂರ್ ಫೈನಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಕೊನೆಗೊಳಿಸಿದ್ದಾರೆ. ಆದ್ದರಿಂದ ಇತರ ಭಾರತೀಯ ಆಟಗಾರರಿಗಿಂತ ಅವರು ಮುಂದಿದ್ದಾರೆ,

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ನಿರತರಾಗಿದ್ದ ಸಿಂಧು, ಕಳೆದ ವಾರ ನಡೆದ ಮಲೇಶ್ಯ ಮಾಸ್ಟರ್ಸ್‌ನ್ನು ತಪ್ಪಿಸಿಕೊಂಡಿದ್ದರು. ಬುಧವಾರ ಅವರು ಮಾಜಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಚೀನಾದ ಲಿ ಕ್ಸೂರೈ ಅವರನ್ನು ಎದರಿಸಲಿದ್ದಾರೆ.

ಮತ್ತೊಂದೆಡೆ ಸೈನಾ, ಮಲೇಶ್ಯ ಮಾಸ್ಟರ್ಸ್ ಟೂರ್ನಿಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದು, ಸೆಮಿಫೈನಲ್‌ನಲ್ಲಿ ಮರೀನ್‌ಗೆ ಶರಣಾಗಿದ್ದರು. ಅವರು ತಮ್ಮ ಪ್ರಥಮ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.

ಇನ್ನು ಕಳೆದ ವಾರ ನಡೆದ ಮಲೇಶ್ಯ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೆ ತಲುಪಿದ್ದ ಕಿಡಂಬಿ ಶ್ರೀಕಾಂತ್, ತಮ್ಮ ಪ್ರಥಮ ಪಂದ್ಯದಲ್ಲಿ ಮಲೇಶ್ಯದ ಲಿವ್ ಡಾರೆನ್‌ರನ್ನು ಎದುರಿಸಲಿದ್ದಾರೆ.

ಸಮೀರ್, ಪ್ರಣೀತ್, ಪ್ರಣೊಯ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್‌ಶೆಟ್ಟಿ, ಮನು ಅತ್ರಿ, ಸುಮಿತ್ ರೆಡ್ಡಿ, ಅಶ್ವಿನಿ ಪೊನ್ನಪ್ಪ ಸೇರಿದಂತೆ ಹಲವು ಭಾರತೀಯ ಆಟಗಾರರು ಇಂಡೊನೇಶ್ಯ ಟೂರ್ನಿಯ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News