ಇವಿಎಂ ಬಗ್ಗೆ ಹ್ಯಾಕರ್ ನಡೆಸಿದ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್ ಆಯೋಜಿಸಿತ್ತು: ರವಿಶಂಕರ್ ಪ್ರಸಾದ್ ಆರೋಪ

Update: 2019-01-22 11:23 GMT

ಹೊಸದಿಲ್ಲಿ, ಜ. 22 : ಕಳೆದ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಸೈಬರ್ ತಜ್ಞನೊಬ್ಬ ಹೇಳಿಕೊಂಡ ಇವಿಎಂ ಹ್ಯಾಕಥಾನ್ ಅನ್ನು ಲಂಡನ್ ನಲ್ಲಿ ಕಾಂಗ್ರೆಸ್ ಆಯೋಜಿಸಿತ್ತು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

ಈ ಸಂದರ್ಭ ಲಂಡನ್ ನಲ್ಲಿ ಕಾಂಗ್ರೆಸ್ ನಾಯಕ ಕಬಿಲ್ ಸಿಬಲ್ ಅವರು ಯಾಕೆ ಹಾಜರಿದ್ದರೆಂದೂ ಪ್ರಸಾದ್ ಪ್ರಶ್ನಿಸಿದ್ದಾರೆ.

''ಭಾರತದ ಚುನಾವಣಾ ಫಲಿತಾಂಶಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಈ ಹ್ಯಾಕಥಾನ್ ಆಯೋಜಿಸಿತ್ತೇ? ಕಪಿಲ್ ಸಿಬಲ್ ಅಲ್ಲೇನು ಮಾಡುತ್ತಿದ್ದರು ? ನಾನು ಹೇಳುತ್ತೇನೆ. ಇಡೀ ಕಾರ್ಯಕ್ರಮದ ಮೇಲುಸ್ತುವಾರಿ ನೋಡಿಕೊಳ್ಳಲು ಅವರು ಅಲ್ಲಿದ್ದರು'' ಎಂದು ಪ್ರಸಾದ್ ಹೇಳಿದರು.

''ಆ ಸೈಬರ್ ತಜ್ಞನ ಹೇಳಿಕೆ ಸುಳ್ಳೆಂದು ನಾವು ಬಯಲುಗೊಳಿಸುತ್ತೇವೆ,'' ಎಂದು ಹೇಳಿದ ಸಚಿವ ಕಾಂಗ್ರೆಸ್ 2014ರ ಚುನಾವಣಾ ಫಲಿತಾಂಶವನ್ನು ಅವಮಾನಿಸುತ್ತಿದೆ ಎಂದರು.

''ಕಾಂಗ್ರೆಸ್ ಪಕ್ಷ ಇಂತಹ ಕಾರ್ಯಕ್ರಮಗಳನ್ನು ಸೃಷ್ಟಿಸುತ್ತಿದೆ, ಅವರೀಗಾಗಲೇ 2019ರ ಚುನಾವಣೆ ಸೋಲುತ್ತಿದ್ದೇವೆ ಎಂಬ ಭಾವನೆ ಹೊಂದಲು ಆರಂಭಿಸಿದ್ದಾರೆ. ಯುಪಿಎ ಅಧಿಕಾರದಲ್ಲಿರುವಾಗ ಇವಿಎಂ ವಿವಾದಗಳೇಕೆ ಉಂಟಾಗಿಲ್ಲ? 2010ರಲ್ಲಿ ಉಸ್ತುವಾರಿ ಸಮಿತಿ ರಚನೆಯಾದಾಗಲೂ ಏಕೆ ವಿವಾದವುಂಟಾಗಿಲ್ಲ? ಕಾಂಗ್ರೆಸ್ ಆಡಳಿತವಿರುವಾಗ ಇವಿಎಂ ಹ್ಯಾಕ್ ಮಾಡುವಷ್ಟು ಆಗ ಬಿಜೆಪಿ ಪ್ರಬಲವಾಗಿತ್ತೇ ?'' ಎಂದು ರವಿ ಶಂಕರ್ ಪ್ರಸಾದ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಇತ್ತೀಚೆಗೆ ವಿಧಾನಸಭಾ ಚುನಾವಣೆ ಗೆದ್ದ ರಾಜ್ಯಗಳಲ್ಲಿ ಇವಿಎಂ ಬಗ್ಗೆ ಯಾವುದೇ ಪ್ರಶ್ನೆಗಳೇಕೆ ಎದ್ದಿಲ್ಲ ಎಂದೂ ಅವರು ಕೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News