'ಸಂವಿಧಾನ' ಕುರಿತ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರು

Update: 2019-01-22 13:24 GMT

ಬೆಂಗಳೂರು, ಜ.22: ಸಮಾಜ ಕಲ್ಯಾಣ ಇಲಾಖೆ ನಗರದ ಖಾಸಗಿ ಹೊಟೇಲ್‌ನಲ್ಲಿ ‘ಸಂವಿಧಾನ ಸಂವಾದ’ ಕುರಿತು ಆಯೋಜಿಸಿದ್ದ ಎರಡು ದಿನಗಳ ಸಂವಾದ ಗೋಷ್ಟಿ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಿದ ಘಟನೆ ನಡೆಯಿತು.

ಸಿದ್ಧಗಂಗಾ ಸ್ವಾಮೀಜಿ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಆದಾಗ್ಯೂ ಬಿಜೆಪಿ ನಾಯಕ ಗೋ.ಮಧುಸೂದನ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮ ಹಾಗೂ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕೂಡಲೆ ಕಾರ್ಯಕ್ರಮ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಇಲ್ಲಿ ಯಾವುದೇ ರೀತಿಯ ಮನೋರಂಜನಾ ಕಾರ್ಯಕ್ರಮ ನಡೆಯುತ್ತಿಲ್ಲ. ಸಂವಿಧಾನದ ಕುರಿತ ಸಂವಾದವನ್ನು ಆಯೋಜಿಸಲಾಗಿದೆ. ಕಾಯಕವೇ ಕೈಲಾಸ ಎಂಬುದು ಬಸವಣ್ಣನವರ ಆಶಯವಾಗಿತ್ತು. ಇದೇ ಕಾರಣದಿಂದ ಪೂರ್ವನಿಗದಿಯಾಗಿರುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲವೆಂದು ಪ್ರತಿಭಟನಾಕಾರರಿಗೆ ಮನವೊಲಿಸಲು ಪ್ರಯತ್ನಿಸಿದರು.

ಕಾರ್ಯಕ್ರಮ ಧಿಕ್ಕರಿಸಿದ ಗೋ.ಮ: ಸಂವಾದ ಗೋಷ್ಟಿಯಲ್ಲಿ ‘ಸಮಾನತೆಯ ಅನ್ವೇಷಣೆ ಸಂವಿಧಾನದ ಸಂಭಾಷಣೆಗಳು’ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬಿಜೆಪಿ ವಕ್ತಾರ ಗೋ.ಮಧುಸೂದನ್, ಕಾರ್ಯಕ್ರಮವನ್ನು ಧಿಕ್ಕರಿಸಿ ಹೊರನಡೆದರು.

ಬಳಿಕ ಮಾತನಾಡಿದ ಅವರು, ಸಿದ್ಧಗಂಗಾ ಸಂಸ್ಥಾನದ ಹಿರಿಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದೆ. ಹೀಗಿದ್ದರೂ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಅಲ್ಲದೆ, ದೇಶದ್ರೋಹದ ಹೇಳಿಕೆ ನೀಡಿರುವ ಸಂಬಂಧ ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಒಂದು ತಾಸು ಪೊಲೀಸರು ಭದ್ರತೆ ಹಿಂಪಡೆದರೆ ಇಡೀ ಹಿಂದುಗಳನ್ನು ತುಂಡು ಮಾಡುವುದಾಗಿ ಹೇಳಿಕೆ ನೀಡಿರುವ ಅಸಾದುದ್ದಿನ್ ಓವೈಸಿ ಅವರನ್ನು ಕರೆಸಲಾಗಿದೆ. ಅಲ್ಲದೆ, ನಗರ ನಕ್ಸಲರಿಗೆ ಬೆಂಬಲ ಸೂಚಿಸುವವರಿಗೆ ಆಹ್ವಾನ ನೀಡಲಾಗಿದೆ. ಇದೇ ಕಾರಣದಿಂದಾಗಿ ಕಾರ್ಯಕ್ರಮ ಧಿಕ್ಕರಿಸುತ್ತಿರುವುದಾಗಿ ಹೇಳಿದರು.

ಕೊನೆಗೂ ರದ್ದಾದ ಕಾರ್ಯಕ್ರಮ: ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದು ಮಾಡುವುದಾಗಿ ಇಲಾಖೆ ಅಧಿಕಾರಿಗಳು ಘೋಷಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News