ಸಿದ್ಧಗಂಗಾ ಶ್ರೀ ನಿಧನಕ್ಕೆ ಸಚಿವ ಎಚ್.ಡಿ.ರೇವಣ್ಣ ಕಂಬನಿ

Update: 2019-01-22 14:14 GMT

ಬೆಂಗಳೂರು, ಜ.22: ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳಾದ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ನಿಧನರಾದ ವಿಷಯ ತಿಳಿದು ಆಘಾತವುಂಟಾಗಿದೆ ಎಂದು ವಿದೇಶ ಪ್ರವಾಸದಲ್ಲಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕಂಬನಿ ಮಿಡಿದಿದ್ದಾರೆ.

ಶ್ರೀಗಳು ತ್ರಿವಿಧ ದಾಸೋಹದಿಂದ ಲಕ್ಷಾಂತರ ಮಕ್ಕಳ ಬಾಳು ಬೆಳಗಿದವರು. ಶಿಕ್ಷಣ, ಅನ್ನದಾಸೋಹದ ಅವರ ಕೈಂಕರ್ಯ ದೇಶ, ಭಾಷೆ, ಜಾತಿ, ಧರ್ಮಗಳ ಎಲ್ಲೆ ಮೀರಿ ಮಾದರಿಯಾಗುವಂತಹದ್ದು ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಇಡೀ ಮನುಕುಲಕ್ಕೆ ದಾರಿದೀಪವಾಗಿ ಯುಗಪುರುಷವಾಗಿದ್ದ ಶ್ರೀಗಳ ಅಗಲಿಕೆಯಿಂದ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ. ಪುಣ್ಯ ಪುರುಷರಾದ ಶ್ರೀಗಳ ಪಾದಸ್ಪರ್ಶದ ಪುಣ್ಯ ಭೂಮಿಗೆ ನನ್ನ ಭಕ್ತಿಪೂರ್ವಕ ಕೋಟಿ ನಮನಗಳು ಎಂದು ರೇವಣ್ಣ ಹೇಳಿದ್ದಾರೆ.

ಶ್ರೀಗಳ ಅಗಲಿಕೆಯಿಂದ ದುಃಖತಪ್ತರಾದ ಅಸಂಖ್ಯಾತ ಭಕ್ತರು, ವಿದ್ಯಾರ್ಥಿಗಳು, ಹಿತೈಷಿಗಳು ಮತ್ತು ಶ್ರೀಮಠದ ಸಿಬ್ಬಂದಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News