ಸ್ಥಳೀಯ ಸಂಸ್ಥೆಗಳ ಅಧಿಕಾರದ ಆಶಯ ಈಡೇರಿಲ್ಲ: ಹಾಮಿದ್ ಅನ್ಸಾರಿ

Update: 2019-01-22 14:16 GMT

ಬೆಂಗಳೂರು, ಜ.22: ಸ್ಥಳೀಯ ಸಂಸ್ಥೆಗಳ ಅಧಿಕಾರ ಹೆಚ್ಚಳಕ್ಕಾಗಿ ಸಂವಿಧಾನಕ್ಕೆ 73 ಮತ್ತು 73ನೇ ತಿದ್ದುಪಡಿ ತಂದಿದ್ದರೂ, ಅದರ ಆಶಯ ಇದುವರೆಗೂ ಈಡೇರಿಲ್ಲವೆಂದು ಮಾಜಿ ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರ ಖಾಸಗಿ ಹೊಟೇಲ್‌ನಲ್ಲಿ ಹಮ್ಮಿಕೊಂಡಿದ್ದ ‘ಸಮಾನತೆಯ ಅನ್ವೇಷಣೆ ಸಂವಿಧಾನದ ಸಂಭಾಷಣೆಗಳು’ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವುದಕ್ಕೆ ಅನುಕೂಲವಾಗುವಂತೆ ಸ್ಥಳೀಯ ರಾಜಕೀಯ ಪಕ್ಷಗಳು ಹೆಚ್ಚಿನ ಒತ್ತು ನೀಡುತ್ತಿಲ್ಲ. ಪರಿಣಾಮ ಸಂವಿಧಾನದ ತಿದ್ದುಪಡಿಯ ಮೂಲ ಆಶಯವನ್ನು ಈಡೇರಿಲ್ಲ. ಈ ಕಾರಣದಿಂದಾಗಿ ಸ್ಥಳೀಯ ಸಂಸ್ಥೆಗಳು ಸಂವಿಧಾನದಿಂದ ಅಧಿಕಾರ ಪಡೆದಿದ್ದರೂ ಯಾವುದೇ ರೀತಿಯ ಬದಲಾವಣೆ ಕಾಣುತ್ತಿಲ್ಲ ಎಂದು ಅವರು ವಿಷಾದಿಸಿದರು.

ಹಲವು ದಶಕಗಳಿಂದ ಒಕ್ಕೂಟ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಅಪಸ್ವರಗಳು ಕೇಳಿ ಬರುತ್ತಿವೆ. ರಾಜಕೀಯ ಪಕ್ಷಗಳ ಬೇರೆ ಬೇರೆ ಧೋರಣೆಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಸಮಾಜದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದೆಲ್ಲವನ್ನು ಸರಿಪಡಿಸಿಕೊಂಡು ಹೋಗಬೇಕಾದದ್ದು ನಮ್ಮೆಲ್ಲರ ಕರ್ತವ್ಯವೆಂದು ಅವರು ಹೇಳಿದರು.

ಪ್ರಜಾಪ್ರಭುತ್ವದಡಿ ಹಾಗೂ ನ್ಯಾಯಪರವಾಗಿ ಕಾರ್ಯನಿರ್ವಹಿಸುವ ಮೂಲಕ ಒಕ್ಕೂಟ ವ್ಯವಸ್ಥೆಯಲ್ಲಿ ಆಗಾಗ ಉಂಟಾಗಬಹುದಾದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಲ್ಲ ರಾಜ್ಯಗಳೊಂದಿಗೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡು ಮುನ್ನಡೆಯಬೇಕೆಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ, ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್ ಸೇರಿದಂತೆ ಶಿಕ್ಷಣ, ರಾಜಕೀಯ ತಜ್ಞರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News