ನಮ್ಮ ಮೆಟ್ರೋ: ಒಂದು ವರ್ಷದಲ್ಲಿ 4 ಕೋಟಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ

Update: 2019-01-22 14:21 GMT

ಬೆಂಗಳೂರು, ಜ.22: ಒಂದು ವರ್ಷದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ ಕಂಡಿದ್ದು, ಒಂದು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆ 4 ಕೋಟಿ  ಹೆಚ್ಚಾಗಿದೆ.

2017ರಲ್ಲಿ 9.27 ಕೋಟಿ ಇದ್ದ ಪ್ರಯಾಣಿಕರ ಸಂಖ್ಯೆ ನೇರಳೆ ಮಾರ್ಗದಲ್ಲಿ ಆರು ಬೋಗಿಯ ಮೆಟ್ರೋ ಸಂಚಾರ ಆರಂಭವಾದ ಬಳಿಕ 13.17 ಕೋಟಿ ಅಂದರೆ ಒಟ್ಟು 4 ಕೋಟಿ ಪ್ರಯಾಣಿಕರ ಸಂಖ್ಯೆ ಒಂದು ವರ್ಷದಲ್ಲಿ ಹೆಚ್ಚಾಗಿದೆ. ಪೀಕ್ ಅವಧಿಯಲ್ಲಿ 1.19 ಕೋಟಿ ಮಂದಿ ಪ್ರಯಾಣಿಸಿದ್ದರೆ, ಆರು ಬೋಗಿಗಳ ಮೆಟ್ರೋ ಆರಂಭವಾದ ಬಳಿಕ ಮೇ ತಿಂಗಳಲ್ಲಿ 1.08 ಕೋಟಿ ಇದ್ದ ಪ್ರಯಾಣಿಕರ ಸಂಖ್ಯೆ ಜೂನ್ ವೇಳೆಗೆ 1.1 ಕೋಟಿಯಾಗಿತ್ತು.

ಹಸಿರು ಮಾರ್ಗಕ್ಕೆ ಆರು ಬೋಗಿ ರೈಲು: ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಆರು ಬೋಗಿಯ ಮೆಟ್ರೋ ಸಂಚಾರ ಆರಂಭವಾಗಲಿದೆ. ಇನ್ನು ಎರಡು ಆರು ಬೋಗಿಯ ಮೆಟ್ರೋ ಶೀಘ್ರವೇ ಈ ಮಾರ್ಗದಲ್ಲಿ ಸಂಚರಿಸಲಿದೆ. ಪೀಕ್ ಅವಧಿಯಲ್ಲಿ ರೈಲು ಸಂಚರಿಸಲಿದೆ. ಸೆಪ್ಟೆಂಬರ್ ಒಳಗೆ ಎಲ್ಲಾ 50 ರೈಲುಗಳು ಆರು ಬೋಗಿಯ ರೈಲುಗಳಾಗಲಿವೆ.

5 ಲಕ್ಷ ಪ್ರಯಾಣಿಕರ ಗುರಿ: ಎಲ್ಲ ಮೆಟ್ರೋ ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿ ಪರಿವರ್ತಿಸಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ದಿನಕ್ಕೆ ಒಟ್ಟು 5 ಲಕ್ಷ ಪ್ರಯಾಣಿಕರನ್ನು ಹೊಂದುವ ಗುರಿಯನ್ನಿಟ್ಟುಕೊಳ್ಳಲಾಗಿದೆ.

ಗೊಟ್ಟಿಗೆರೆ-ನಾಗವಾರ ಸುರಂಗ ಮಾರ್ಗ ಟೆಂಡರ್: ಬಿಎಂಆರ್‌ಸಿಎಲ್ ಸೋಮವಾರ ಗೊಟ್ಟಿಗೆರೆ-ನಾಗವಾರ ಸುರಂಗ ಮಾರ್ಗದ ಟೆಂಡರ್ ಆಹ್ವಾನಿಸಿತ್ತು. ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಮೊದಲನೆಯದ್ದು ಡೈರಿ ವೃತ್ತ, ಲಾಂಗ್‌ಫರ್ಡ್ ಟೌನ್ ಟ್ಯಾನರಿ ರಸ್ತೆ ಬಳಿಕ ವೆಲ್ಲಾರ ಜಂಕ್ಷನ್, ಶಿವಾಜಿನಗರ, ಕಂಟೋನ್‌ಮೆಂಟ್, ಪಾಟರಿ ಟೌನ್ ಕಾಮಗಾರಿ ಆರಂಭವಾಗಲಿದೆ.

ಪ್ರಯಾಣಿಕರ ಸಂಖ್ಯೆ ಇಳಿಕೆ: 2018ರ ಡಿಸೆಂಬರ್‌ನಲ್ಲಿ ಮೈಸೂರು ರಸ್ತೆ, ಬೈಯಪ್ಪನಹಳ್ಳಿ ಮಾರ್ಗದ ಟ್ರಿನಿಟಿ ವೃತ್ತದ ಬಳಿ ವಯಾಡಕ್ಟ್‌ನಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಮೆಟ್ರೋ ಸಂಚಾರವನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಹೀಗೆ ಹಲವಾರು ಬಾರಿ ಮೆಟ್ರೋ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News