ಸಿದ್ಧಗಂಗಾ ಶ್ರೀಗಳಿಗೆ 'ಭಾರತ ರತ್ನ' ನೀಡುವಂತೆ ಬಾಬಾ ರಾಮ್‌ದೇವ್ ಆಗ್ರಹ

Update: 2019-01-22 15:37 GMT

ಬೆಂಗಳೂರು, ಜ.22: ದೇಶದಲ್ಲಿ ಕ್ರೀಡೆ, ಸಂಗೀತ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ದೇಶದ ಅತ್ಯುನ್ನತ ನಾಗರಿಕ ಸನ್ಮಾನ ‘ಭಾರತ ರತ್ನ’ ನೀಡಲಾಗುತ್ತದೆ. ಆದರೆ, ತ್ರಿವಿಧ ದಾಸೋಹದೊಂದಿಗೆ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮಾಡಿರುವ ಸಿದ್ಧಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೇಕೆ ‘ಭಾರತ ರತ್ನ’ ನೀಡಬಾರದು ಎಂದು ಯೋಗ ಗುರು ಬಾಬಾ ರಾಮ್‌ದೇವ್ ಪ್ರಶ್ನಿಸಿದ್ದಾರೆ.

ಮಂಗಳವಾರ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ ಅವರು, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವುದರಿಂದ, ಭಾರತ ರತ್ನ ಪುರಸ್ಕಾರದ ಗೌರವ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.

ಗುರು ಪರಂಪರೆಗೆ ಸುದೀರ್ಘವಾದ ಇತಿಹಾಸವಿದೆ. ಗುರು ಪರಂಪರೆ, ಯೋಗ, ದಾಸೋಹ ಪದ್ಧತಿಗಳು ಆಚರಣೆಗೆ ಬಂದಿದ್ದು ನಮ್ಮ ದೇಶದಿಂದ. ಇಂದು ಈ ಪರಂಪರೆಯನ್ನು ಇಡೀ ಜಗತ್ತೇ ಅನುಕರಣೆ ಮಾಡುತ್ತಿದೆ. ಬಸವವಾದಿ ಶರಣರು ಕಾಯಕವೇ ಕೈಲಾಸ ಅನ್ನೋ ಸಂದೇಶವನ್ನು ನಾಡಿಗೆ ಸಾರಿದ್ದಾರೆ ಎಂದು ಅವರು ಹೇಳಿದರು.

ಇಂದು ನಾವು ನಡೆದಾಡುವ ದೇವರು, ಆಧುನಿಕ ಬಸವಣ್ಣನನ್ನು ಕಳೆದುಕೊಂಡಿದ್ದೇವೆ. ಇದು ಬರಿ ರಾಜ್ಯಕ್ಕೆ ಅಲ್ಲ, ಇಡೀ ದೇಶದ ಅಧ್ಯಾತ್ಮಲೋಕಕ್ಕೆ ತುಂಬಲಾರದ ನಷ್ಟ. ಸಿದ್ಧಗಂಗಾ ಶ್ರೀಗಳ ಸುದೀರ್ಘ 111 ವರ್ಷಗಳ ಚಿಂತನೆ, ಸಾಮಾಜಿಕ ಕಾಳಜಿಗಳು ಮುಂದಿನ ಅಧ್ಯಾತ್ಮಜ್ಞಾನದ ಕೈಗನ್ನಡಿ. ಅವರ ಜೀವನವೇ ನಮಗೆ ಆದರ್ಶ ಪ್ರಾಯವಾದದ್ದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News