ಎಲ್‌ಪಿಜಿ ವಿತರಣಾ ಕೇಂದ್ರ ನಿರಾಕ್ಷೇಪಣಾ ಪತ್ರ ಪಡೆದಿಲ್ಲ: ಹೈಕೋರ್ಟ್‌ಗೆ ಬಿಬಿಎಂಪಿ ಹೇಳಿಕೆ

Update: 2019-01-22 15:46 GMT

ಬೆಂಗಳೂರು, ಜ.22: ಜಯನಗರ ಮೊದಲನೆ ಹಂತದ ಅಶೋಕ ಪಿಲ್ಲರ್ ಬಳಿಯ 100 ಅಡಿ ರಸ್ತೆಯಲ್ಲಿನ ಟೋಟಲ್ ಗ್ಯಾಸ್ ಆಟೊ ಎಲ್‌ಪಿಜಿ ವಿತರಣಾ ಕೇಂದ್ರ ನಡೆಸುತ್ತಿರುವ ಉದ್ದಿಮೆ ಚಟುವಟಿಕೆ ಕಾನೂನು ಬಾಹಿರವಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ ತಿಳಿಸಿದೆ.

ಎಲ್‌ಪಿಜಿ ವಿತರಣಾ ಕೇಂದ್ರದಿಂದ ತೊಂದರೆ ಆಗುತ್ತಿದೆ ಎಂದು ಆಕ್ಷೇಪಿಸಿ ಜಯನಗರ ಮೊದಲನೇ ಹಂತದ ಐದನೇ ಕ್ರಾಸ್‌ನಲ್ಲಿರುವ ಚಪಲಮ್ಮ ಮತ್ತು ಪ್ಲೇಗಮ್ಮ ದೇವಸ್ಥಾನಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಂ.ನಟರಾಜ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಕೆ.ಎನ್.ಪುಟ್ಟೇಗೌಡ ವಾದ ಮಂಡಿಸಿ, ಪ್ರತಿವಾದಿ ಟೋಟಲ್ ಗ್ಯಾಸ್ ಆಟೊ ಎಲ್‌ಪಿಜಿ ವಿತರಣಾ ಕೇಂದ್ರವು ಪ್ಲೇಗಮ್ಮ ದೇವಸ್ಥಾನಗಳ ಅಭಿವೃದ್ಧಿ ಸಂಘ ಮತ್ತು ಸುತ್ತಮುತ್ತಲಿನವರ ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಈ ಕುರಿತಂತೆ ಬಿಬಿಎಂಪಿ ನೀಡಿದ್ದ ನೋಟಿಸ್‌ಗೆ ಸಮಜಾಯಿಷಿ ನೀಡಿಲ್ಲ. ಕರ್ನಾಟಕ ಪೌರಾಡಳಿತ ಕಾಯ್ದೆಯ ಕಲಂ 354ರ ಪ್ರಕಾರ ವಿದ್ಯುತ್ ಸಂಪರ್ಕಕ್ಕೂ ಅನುಮತಿ ಪಡೆದಿಲ್ಲ ಎಂದು ಆಕ್ಷೇಪಿಸಿದರು.

ದೇವಸ್ಥಾನದಲ್ಲಿ ಆಗಾಗ್ಗೆ ಹೋಮ, ಹವನ ನಡೆಸಲಾಗುತ್ತದೆ. ಇದು ಗ್ಯಾಸ್ ಕೇಂದ್ರದ ಅನತಿ ದೂರದಲ್ಲೇ ಇರುವ ಕಾರಣ, ಒಂದು ವೇಳೆ ಏನಾದರೂ ಅನಾಹುತ ಆದರೆ ಪರಿಣಾಮ ಗಂಭೀರವಾಗುತ್ತದೆ. ಅಂತೆಯೇ ಖಾಸಗಿ ಶಾಲೆಯೂ ಇದೆ. ಹೀಗಾಗಿ, ಕೇಂದ್ರ ಮುಚ್ಚಲು ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. ಇದನ್ನು ಅಲ್ಲಗಳೆದ ಪ್ರತಿವಾದಿ ಪರ ವಕೀಲರು, ಈಗಾಗಲೇ ಪೆಟ್ರೋಲಿಯಂ ಕಾಯ್ದೆ ಅಡಿ ಪರವಾನಗಿ ಪಡೆಯಲಾಗಿದೆ. ಹೀಗಾಗಿ, ಪಾಲಿಕೆ ಅನುಮತಿ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News