ಮಂಗಳೂರಿನಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರ ಸ್ಥಾಪನೆ ಕಾಮಗಾರಿಗೆ ಮಂಜೂರಾತಿ: ಸಚಿವ ಡಿ.ಸಿ.ತಮ್ಮಣ್ಣ

Update: 2019-01-22 15:57 GMT

ಬೆಂಗಳೂರು, ಜ.22: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರವನ್ನು ಪ್ರಾರಂಭಿಸುವುದಾಗಿ 2013-14ನೆ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಸದರಿ ತರಬೇತಿ ಕೇಂದ್ರ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡ್ರೈವಿಂಗ್ ತರಬೇತಿ ಕೇಂದ್ರದ ಕಾಮಗಾರಿಯು ಶೇ.20ರಷ್ಟು ಈಗಾಗಲೇ ಪೂರ್ಣಗೊಂಡಿದ್ದು, 2019ರ ಅಂತ್ಯಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಹನ ತಪಾಸಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ವಿವರವಾದ ಅಂದಾಜು ಪಟ್ಟಿಯನ್ನು ತಯಾರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಮಂಗಳೂರು ಕಚೇರಿಯಲ್ಲಿ ದಿನ ಒಂದಕ್ಕೆ 60 ಅಭ್ಯರ್ಥಿಗಳಿಗೆ ಕಲಿಕಾ ಚಾಲನಾ ಪರವಾನಿಗೆ ಮತ್ತು 70 ರಿಂದ 100 ಚಾಲನಾ ಪರವಾನಿಗೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.  

ಮಂಗಳೂರು ಕಚೇರಿಯಲ್ಲಿ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆ ಖಾಲಿಯಿದ್ದು, ಸದರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿರುತ್ತದೆ. ಹಾಗೂ ಸದರಿ ಕಚೇರಿಯಲ್ಲಿ ವಿವಿಧ ವೃಂದಗಳಲ್ಲಿ ಖಾಲಿಯಿರುವ 57 ಹುದ್ದೆಗಳನ್ನು ತುಂಬಲಾಗುವುದು ಎಂದರು. ಮಂಗಳೂರು ಕಚೇರಿಯಲ್ಲಿ ವಾಹನ್-4 ಮತ್ತು ಸಾರಥಿ-4 ಸೇವೆಗಳನ್ನು ಜಾರಿಗೆ ತರಲಾಗಿದ್ದು, ಈ ತಂತ್ರಾಂಶಗಳ ಮೂಲಕ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗುತ್ತಿದ್ದು, ಮಧ್ಯವರ್ತಿಗಳಿಂದ ನಾಗರಿಕರಿಗೆ ಸುಲಿಗೆ ಹಾಗೂ ವಂಚನೆ ಆಗುತ್ತಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News