ಬೆಂಗಳೂರು ವಿವಿಯಲ್ಲಿ ಪಿಎಚ್.ಡಿ ಗೆ ಅನುಮತಿ ಇಲ್ಲ !

Update: 2019-01-22 16:00 GMT

ಬೆಂಗಳೂರು, ಜ.22: ರಾಜ್ಯ ಸರಕಾರ ಹಾಗೂ ರಾಜ್ಯಪಾಲರಿಂದ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಸಕ್ತ ಸಾಲಿನಲ್ಲಿ ಪಿಎಚ್.ಡಿ ನೋಟಿಫಿಕೇಷನ್ ಹೊರಡಿಸಲು ಅನುಮತಿ ಸಿಗದಿದಿರುವುದು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ಬಹುತೇಕ ವಿಭಾಗಗಳಲ್ಲಿ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ಇದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದಾದ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಆದರೆ, ಹೊಸದಾಗಿ ರಚನೆಯಾದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ನೋಟಿಫಿಕೇಷನ್‌ಗೆ ಅವಕಾಶ ನೀಡಿ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅವಕಾಶ ನೀಡಿಲ್ಲ.

2018-19ನೇ ಸಾಲಿನ ಪಿಎಚ್.ಡಿ ನೋಟಿಫಿಕೇಷನ್‌ಗೆ ಅನುಮತಿ ಕೋರಿ ಬೆಂಗಳೂರು ವಿವಿ, ಆರು ತಿಂಗಳ ಹಿಂದೆಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್‌ರವರು ಖುದ್ದಾಗಿ ಉನ್ನತ ಶಿಕ್ಷಣ ಸಚಿವರು ಹಾಗೂ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಪ್ರಯೋಜನವಾಗಿಲ್ಲ. ಪಿಎಚ್.ಡಿ ನೋಟಿಫಿಕೇಷನ್ ಹೊರಡಿಸಲು ಅನುಮತಿ ನೀಡುವ ಸಂಬಂಧ ಸಚಿವ ಜಿ.ಟಿ.ದೇವೇಗೌಡ, ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದರು. ಆದರೆ, ಈವರೆಗೂ ಅನುಮತಿ ನೀಡುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ.

ಖಾಯಂ ಬೋಧಕರ ಕೊರತೆ: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪ್ರಮುಖ ವಿಭಾಗಗಳಲ್ಲಿ ಖಾಯಂ ಬೋಧಕರ ಕೊರತೆ ಇದೆ. ಹೊಸ ವಿವಿ ಅಸ್ತಿತ್ವಕ್ಕೆ ಬಂದ ನಂತರ ಬೋಧಕರ ನೇಮಕ ಪ್ರಕ್ರಿಯೆ ನಡೆದಿಲ್ಲ. ಆದರೆ, ಈ ವಿವಿಗೆ ಪಿಎಚ್.ಡಿಗೆ ಅಭ್ಯರ್ಥಿಗಳಿಂದ ಅರ್ಜಿ ಕರೆಯಲು ಅನುಮೋದನೆ ಸಿಕ್ಕಿದೆ. ಸಂಶೋಧಕರ ನೇಮಕ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದೆ. ಆದರೆ, ಪಿಎಚ್.ಡಿ ನೋಟಿಫಿಕೇಷನ್‌ಗೆ ಸರಕಾರ ಅನುಮತಿ ನೀಡಿದ ನಂತರ ಅಗತ್ಯ ಪ್ರಕ್ರಿಯೆ ಶುರು ಮಾಡಿದರೂ, ಸಂಶೋಧನಾ ಕಾರ್ಯ ಆರಂಭಿಸಲು ಕನಿಷ್ಠ ಒಂದು ವರ್ಷ ಬೇಕು !

25 ಕಡೆ ಸಂಶೋಧನೆ: ಬೆಂಗಳೂರು ಕೇಂದ್ರ ವಿವಿಯ ಸೆಂಟ್ರಲ್‌ಕಾಲೇಜು ಆವರಣದಲ್ಲಿ ಪಿಎಚ್.ಡಿ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆ ನಡೆದರೂ, ಅವರ ಸಂಶೋಧನೆ ಮಾತ್ರ ವಿವಿ ವ್ಯಾಪ್ತಿಯ 224 ಕಾಲೇಜುಗಳಲ್ಲಿ ಇರುವ 25 ಸಂಶೋಧನಾ ಕೇಂದ್ರದಲ್ಲಿ ನಡೆಯಲಿದೆ. 224 ಕಾಲೇಜುಗಳ ಪೈಕಿ 70ರಿಂದ 80 ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ನಡೆಯುತ್ತಿದೆ. ಇವುಗಳಲ್ಲಿ 25 ಕಡೆ ಇರುವ ಸಂಶೋಧನಾ ಕೇಂದ್ರಗಳಲ್ಲಿ ಸಂಶೋಧನೆ ನಡೆಯಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News