ಲಾರಾ ದಾಖಲೆ ಸರಿಗಟ್ಟಿದ ಶಿಖರ್ ಧವನ್

Update: 2019-01-23 07:16 GMT

ನೇಪಿಯರ್, ಜ.23: ಭಾರತ ಎಡಗೈ ಆರಂಭಿಕ ದಾಂಡಿಗ ಶಿಖರ್ ಧವನ್ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಾನಾಡಿದ 118ನೇ ಇನಿಂಗ್ಸ್ ನಲ್ಲಿ 5,000 ರನ್ ಪೂರೈಸಿದರು. ಈ ಮೂಲಕ ವೆಸ್ಟ್‌ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆಯನ್ನು ಸರಿಗಟ್ಟಿದರು. ಲಾರಾ ಕೂಡ 118ನೇ ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದ್ದರು.

ನ್ಯೂಝಿಲೆಂಡ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 10 ರನ್ ಗಳಿಸಿದ ತಕ್ಷಣವೇ ಧವನ್ ಈ ಸಾಧನೆ ಮಾಡಿದರು. ನಾಯಕ ವಿರಾಟ್‌ಕೊಹ್ಲಿ ಬಳಿಕ ಅತ್ಯಂತ ವೇಗವಾಗಿ 5,000 ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ ಅತ್ಯಂತ ವೇಗವಾಗಿ 5,000 ರನ್ ಪೂರೈಸಿದ ವಿಶ್ವದ ಮೊದಲ ದಾಂಡಿಗನಾಗಿದ್ದಾರೆ. ಅಮ್ಲ ಕೇವಲ 101 ಇನಿಂಗ್ಸ್‌ಗಳಲ್ಲಿ ಐದು ಸಹಸ್ರ ರನ್ ಗಳಿಸಿದ್ದರು.

ಕೊಹ್ಲಿ ಹಾಗೂ ವಿವಿಯನ್ ರಿಚರ್ಡ್ಸ್(ತಲಾ 114 ಇನಿಂಗ್ಸ್)ವೇಗವಾಗಿ 5,000 ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಲಾರಾ ಹಾಗೂ ಧವನ್(ತಲಾ 118 ಇನಿಂಗ್ಸ್)3ನೇ ಸ್ಥಾನ ಹಂಚಿಕೊಂಡಿದ್ದಾರೆ. ವಿಲಿಯಮ್ಸನ್ 119 ಇನಿಂಗ್ಸ್‌ಗಳಲ್ಲಿ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News