ನಾನು ಪ್ರತಿ ವರ್ಷ 5 ದಿನಗಳು ಕಾಡಿಗೆ ಹೋಗುತ್ತಿದ್ದೆ: ನರೇಂದ್ರ ಮೋದಿ

Update: 2019-01-23 07:51 GMT

ಹೊಸದಿಲ್ಲಿ, ಜ.23: ತಾನು ಹಿಂದೆ ಪ್ರತಿ ವರ್ಷ ದೀಪಾವಳಿ ರಜೆಗಳ ಸಂದರ್ಭ ಐದು ದಿನಗಳ ಕಾಲ ಕಾಡಿನಲ್ಲಿ ಏಕಾಂಗಿಯಾಗಿ ಕಾಲ ಕಳೆದು ಆತ್ಮಾವಲೋಕನ ಮಾಡುತ್ತಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಫೇಸ್ ಬುಕ್ ಪೇಜ್ ‘ಹ್ಯೂಮನ್ಸ್ ಆಫ್ ಬಾಂಬೆ' ಜತೆಗಿನ ಸಂವಾದದಲ್ಲಿ ವಿವರಿಸಿದ್ದಾರೆ.

ಪ್ರಧಾನಿ ಜತೆಗಿನ ಸಂವಾದವನ್ನು ಸರಣಿಯಂತೆ ಹ್ಯೂಮನ್ಸ್ ಆಫ್ ಬಾಂಬೆ ಬಿಡುಗಡೆ ಮಾಡಿದೆ. ಮೊದಲ ಎರಡು ಕಂತುಗಳಲ್ಲಿ ತಮ್ಮ ಬಾಲ್ಯ, ಚಹಾ ಮಾರಾಟಗಾರನ ಪುತ್ರನಾಗಿ ತಾವು ಬೆಳೆದು ಬಂದ ಬಗೆ, ಆರೆಸ್ಸೆಸ್ ಜತೆಗಿನ ತಮ್ಮ ಸಂಪರ್ಕ ಹಾಗೂ ನಂತರ ಎರಡು ವರ್ಷ ಹಿಮಾಲಯದಲ್ಲಿ ಕಳೆದಿದ್ದುದನ್ನು ಮೋದಿ ವಿವರಿಸಿದ್ದರೆ, ಹೊಸ ಕಂತಿನಲ್ಲಿ ಹಿಮಾಲಯದಿಂದ ಮರಳಿದ ನಂತರದ ತನ್ನ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.

“ಹಿಮಾಲಯದಿಂದ ಮರಳಿದ ನಂತರ ಇನ್ನೊಬ್ಬರ ಸೇವೆಗೆ ಜೀವನ ಮುಡಿಪಾಗಿಡಬೇಕೆಂದು ಬಯಸಿದೆ. ನಂತರ ಅಹ್ಮದಾಬಾದ್ ನಗರಕ್ಕೆ ತೆರಳಿದೆ, ದೊಡ್ಡ ನಗರಕ್ಕೆ ನಾನು ಭೇಟಿ ನೀಡಿದ್ದು ಅದೇ ಮೊದಲು, ಅಲ್ಲಿನ ಜೀವನ ಪಥವೂ ವಿಭಿನ್ನವಾಗಿತ್ತು. ಆಗಾಗ ನನ್ನ ಚಿಕ್ಕಪ್ಪನ ಕ್ಯಾಂಟೀನಿನಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದೆ. ಕೊನೆಗೆ ಆರೆಸ್ಸೆಸ್ಸಿನ ಪೂರ್ಣಕಾಲಿಕ ಪ್ರಚಾರಕನಾದೆ. ವಿವಿಧ ಜನರ ಸಂಪರ್ಕ ಆಗ ನನಗಾಯಿತಲ್ಲದೆ ಹಲವು ಕೆಲಸಗಳನ್ನು ಮಾಡುತ್ತಿದ್ದೆ. ಸರತಿಯುತೆ ಆರೆಸ್ಸೆಸ್ ಕಚೇರಿಯನ್ನು ಶುಚಿಯಾಗಿಡುವ, ಸಹೋದ್ಯೋಗಿಗಳಿಗೆ ಚಹಾ ಮತ್ತು ಆಹಾರ ತಯಾರಿಸುವ ಹಾಗೂ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದೆವು'' ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

“ಕೆಲಸ ಕಾರ್ಯಗಳಲ್ಲಿ ನಿರತವಾಗಿದ್ದರೂ ಹಿಮಾಲಯದಲ್ಲಿದ್ದಾಗ ದೊರೆತಿದ್ದ ಶಾಂತಿಯನ್ನು ಬಿಟ್ಟು ಕೊಡಲು ನಾನು ಬಯಸಿರಲಿಲ್ಲ. ಹೆಚ್ಚಿನವರಿಗೆ ಇದು ತಿಳಿದಿರಲಿಕ್ಕಿಲ್ಲ. ಪ್ರತಿ ದೀಪಾವಳಿಯಂದು ಐದು ದಿನಗಳ ಕಾಲ ನಾನು ಎಲ್ಲಿಯಾದರೂ ಕಾಡಿಗೆ-ಕೇವಲ ಶುದ್ಧ ನೀರು ದೊರೆಯುವ ಸ್ಥಳ ಹಾಗೂ ಜನರಿಲ್ಲದ ಸ್ಥಳದಲ್ಲಿ ಇರುತ್ತಿದ್ದೆ.  ಐದು ದಿನಗಳಿಗೆ ಸಾಕಾಗುವಷ್ಟು ಆಹಾರ ಕೊಂಡು ಹೋಗುತ್ತಿದ್ದೆ. ರೇಡಿಯೋ ಅಥವಾ ದಿನಪತ್ರಿಕೆ ಕೂಡ ಓದುತ್ತಿರಲಿಲ್ಲ. ಆಗಿನ ಕಾಲದಲ್ಲಿ ಹೇಗೂ ಟಿವಿ ಹಾಗೂ ಅಂತರ್ಜಾಲ ಇರಲಿಲ್ಲ. ಹೀಗೆ ಏಕಾಂಗಿಯಾಗಿ ಕಳೆದ ಕ್ಷಣಗಳು ನನಗೆ ಮುಂದಿನ ಜೀವನವನ್ನು ಎದುರಿಸಲು ಶಕ್ತಿ ನೀಡುತ್ತಿತ್ತು. ನೀವು ಅಲ್ಲಿ ಯಾರನ್ನು ಭೇಟಿಯಾಗುತ್ತೀರಿ ಎಂದು ಜನರು ಕೇಳುತ್ತಿದ್ದರು. ಆಗ ನಾನು ‘ನನ್ನನ್ನೇ ಭೇಟಿಯಾಗಲು ಹೋಗುತ್ತಿದ್ದೇನೆ’ ಎನ್ನುತ್ತಿದ್ದೆ'' ಎಂದು ಮೋದಿ ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News