ಶಿವಕುಮಾರ ಸ್ವಾಮೀಜಿಗೆ ಪ್ರಧಾನಿ ಮೋದಿಯಿಂದ ಅಗೌರವ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-01-23 13:11 GMT

ಬೆಂಗಳೂರು, ಜ. 23: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಂತಿಮ ದರ್ಶನ ಪಡೆಯಲು ಪ್ರಧಾನಿ ಮೋದಿಯವರು ಆಗಮಿಸದಿರುವುದು ಶ್ರೀಗಳಿಗೆ ಮತ್ತು ಸಮಾಜಕ್ಕೆ ಅಗೌರವ ತೋರಿಸಿದಂತೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿಯವರು ಬರಬೇಕಿತ್ತು. ಇಡೀ ದೇಶವೇ ಶ್ರೀಗಳನ್ನು ಕಾಣಲು ಆಗಮಿಸಿದ್ದರೂ ಪ್ರಧಾನಿ ಮಾತ್ರ ಬಾರದೇ ಇದ್ದದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸರಕಾರದ ಉನ್ನತ ಸ್ಥಾನದಲ್ಲಿರುವವರು ಶ್ರೀಗಳ ಅಂತಿಮ ದರ್ಶನ ಪಡೆಯಲು ಆಗಮಿಸಲಿಲ್ಲ. ಅಲ್ಲದೆ, ಎರಡು ವರ್ಷಗಳ ಹಿಂದೆಯೇ ಶ್ರೀಗಳಿಗೆ ‘ಭಾರತ ರತ್ನ’ ನೀಡುವಂತೆ ಮನವಿ ಮಾಡಿದ್ದೆವು, ಯಾವುದಕ್ಕೂ ಸ್ಪಂದಿಸಿಲ್ಲ. ಇದು ಇಡೀ ಸಮಾಜಕ್ಕೆ ತೋರುವ ಅಗೌರವ ಎಂದು ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದಗಂಗಾ ಶ್ರೀಗಳ ನಿಧನರಾದ ಹಿನ್ನೆಲೆಯಲ್ಲಿ ಸರಕಾರಿ ರಜೆ ಘೋಷಿಸಿದ್ದರು. ಕೆಲ ಶಾಲಾ-ಕಾಲೇಜುಗಳು ತೆರೆದಿದ್ದು ಗಮನಕ್ಕೆ ಬಂದಿದೆ. ಶ್ರೀಗಳ ‘ಕಾಯಕವೇ ಕೈಲಾಸ’ ತತ್ವವನ್ನು ಅನುಸರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದೇವೆಂದು ಕೆಲವರು ಸ್ಪಷ್ಟನೆ ನೀಡಿದ್ದಾರೆ. ಆದರೂ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

‘ರೆಸಾರ್ಟ್‌ನಲ್ಲಿ ಶಾಸಕರ ಗಲಾಟೆ ಪ್ರಕರಣ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಕಾನೂನಾತ್ಮಕ ಕ್ರಮಕ್ಕೆ ಕೆಪಿಸಿಸಿ ಆಗ್ರಹಿಸಿದೆ. ಅಲ್ಲದೆ, ನನ್ನ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಲಾಗಿದ್ದು, ನಾವೂ ಸತ್ಯಾಸತ್ಯತೆ ಪರಿಶೀಲಿಸಲಿದ್ದೇವೆ. ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ಒದಗಿಸಿ ಕೊಡಲಾಗುವುದು’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News