ಇಂದು ಕರ್ನಾಟಕ-ಸೌರಾಷ್ಟ್ರ ಸೆಮಿಫೈನಲ್ ಸೆಣಸಾಟ

Update: 2019-01-23 18:45 GMT

ಬೆಂಗಳೂರು, ಜ.23: ಬಲಿಷ್ಠ ತಂಡಗಳಾದ ಕರ್ನಾಟಕ ಹಾಗೂ ಸೌರಾಷ್ಟ್ರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ನಡೆಯುವ 5 ದಿನಗಳ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ರಾಷ್ಟ್ರೀಯ ತಂಡದ ದಾಂಡಿಗರಾದ ಚೇತೇಶ್ವರ ಪೂಜಾರ ಹಾಗೂ ಮಾಯಾಂಕ್ ಅಗರ್ವಾಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸೌರಾಷ್ಟ್ರ ಪರ ಪೂಜಾರ ಕಣಕ್ಕಿಳಿಯಲಿದ್ದರೆ, ಕರ್ನಾಟಕದ ಪರ ಮಾಯಾಂಕ್ ಸ್ಪರ್ಧಿಸಲಿದ್ದಾರೆ.

ಇತ್ತೀಚೆಗೆ ಕೊನೆಗೊಂಡ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಖ್ಯಾತಿಯ ಪೂಜಾರ ಅತ್ಯುತ್ತಮ ಲಯದಲ್ಲಿದ್ದಾರೆ. ಟೆಸ್ಟ್ ಸರಣಿಯ ನಂತರ ರಣಜಿಯಲ್ಲಿ ಪಾಲ್ಗೊಂಡ ಪೂಜಾರ, ಉತ್ತರಪ್ರದೇಶದ ವಿರುದ್ಧ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಜೇಯ 67 ರನ್ ಗಳಿಸಿ ಸೌರಾಷ್ಟ್ರ 6 ವಿಕೆಟ್‌ಗಳ ಜಯ ಸಾಧಿಸಲು ನೆರವಾಗಿದ್ದರು.

ಕರ್ನಾಟಕದ ಪರ ರಣಜಿಯಲ್ಲಿ ತೋರಿದ ಉತ್ತಮ ಪ್ರದರ್ಶನ ಕಾರಣಕ್ಕೆ ಬ್ಯಾಟ್ಸ್‌ಮನ್ ಅಗರ್ವಾಲ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆತಿತ್ತು. ಅವರು ಕೂಡ ಆಸೀಸ್ ವಿರುದ್ಧದ ಸರಣಿಯಲ್ಲಿ ಕೇವಲ 3 ಇನಿಂಗ್ಸ್ ಆಡಿ 195 ರನ್ ಗಳಿಸಿದ್ದರು.

ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದ ಅಗರ್ವಾಲ್ ರಾಜಸ್ಥಾನ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಅಗರ್ವಾಲ್ ಅವರನ್ನು ಹೊರತುಪಡಿಸಿ ನಾಯಕ ಮನೀಷ್ ಪಾಂಡೆ ಕೂಡ ಉತ್ತಮ ಲಯದಲ್ಲಿದ್ದಾರೆ. ವಿನಯಕುಮಾರ್, ಕರುಣ್ ನಾಯರ್, ಜೈದೇವ್ ಉನಾದ್ಕತ್, ಅಭಿಮನ್ಯು ಮಿಥುನ್ ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಆಟಗಾರರಾಗಿದ್ದಾರೆ. ಎರಡೂ ತಂಡಗಳಿಂದ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.

ಕೇರಳದ ವಯನಾಡ್‌ನಲ್ಲಿ ನಡೆಯುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News